ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ ಪ್ರಕರಣಗಳಲ್ಲೊಂದು. ರಾಮ ಜನ್ಮಭೂಮಿಯ ಇತಿಹಾಸವೂ ಅಷ್ಟೇ ಪುರಾತನವಾಗಿದೆ, 1528 ರಿಂದ 2023 ಅಂದರೆ 495 ವರ್ಷಗಳ ಕಾಲಾನುಕ್ರಮವನ್ನು ಹೊಂದಿದೆ. ಹಲವಾರು ಮಹತ್ವದ ಘಟನೆಗಳ ಮೂಲಕ ರಾಮ ಜನ್ಮಭೂಮಿ ವಿಶ್ವವ್ಯಾಪಿ ಗುರುತಿಸಿಕೊಂಡಿದೆ. 2019ರ ನವೆಂಬರ್ 9 ರಾಮಜನ್ಮ ಭೂಮಿ ವಿವಾದದ ಬಗ್ಗೆ ಐತಿಹಾಸಿಕ ತೀರ್ಪು ಹೊರಬಿದ್ದಿತ್ತು. ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು.
ಅಯೋಧ್ಯೆ ವಿವಾದದ ಸಂಪೂರ್ಣ ಪಕ್ಷಿನೋಟ
1528: ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮೊಘಲ್ ಚಕ್ರವರ್ತಿ ಬಾಬರ್‌ನ ಕಮಾಂಡರ್ ಮೀರ್ ಬಾಕಿ ಆದೇಶಿಸಿದ್ದ. ಆದರೆ ಇದು ಭಗವಾನ್ ರಾಮನ ಜನ್ಮಸ್ಥಳ, ಇಲ್ಲಿ ಪ್ರಾಚೀನ ದೇವಾಲಯವಿದೆ ಎಂದು ಹಿಂದೂ ಸಮುದಾಯ ವಾದಿಸಿತ್ತು. ಮಸೀದಿಯ ಒಂದು ಗುಮ್ಮಟದ ಕೆಳಗಿರುವ ಸ್ಥಳವು ರಾಮನ ಜನ್ಮಸ್ಥಳವೆಂದು ಹಿಂದೂಗಳು ಪ್ರತಿಪಾದಿಸಿದರು.
1853-1949: 1853 ರಲ್ಲಿ ಮಸೀದಿಯನ್ನು ನಿರ್ಮಿಸಿದ ಸ್ಥಳದ ಸುತ್ತಲೂ ಕೋಮು ಗಲಭೆಗಳು ಸಂಭವಿಸಿದವು. ಬಳಿಕ 1859 ರಲ್ಲಿ ಬ್ರಿಟಿಷರು ವಿವಾದಿತ ಪ್ರದೇಶದ ಸುತ್ತಲೂ ಬೇಲಿಯನ್ನು ನಿರ್ಮಿಸಿದರು. ಮುಸ್ಲಿಮರಿಗೆ ಮಸೀದಿಯೊಳಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಲಾಯ್ತು. ಅಂಗಳದ ಬಳಿ ಪೂಜೆ ಮಾಡಲು ಹಿಂದೂಗಳಿಗೆ ಅನುಮತಿ ಸಿಕ್ಕಿತು.
1949: 1949ರ ಸಪ್ಟೆಂಬರ್ 23ರಂದು ಮಸೀದಿಯೊಳಗೆ ಭಗವಾನ್ ರಾಮನ ವಿಗ್ರಹಗಳು ಪತ್ತೆಯಾದವು. ಆಗ ವಿವಾದ ಮತ್ತಷ್ಟು ತೀವ್ರತೆ ಪಡೆದುಕೊಂಡಿತು. ಭಗವಾನ್ ರಾಮನೇ ಅಲ್ಲಿ ಪ್ರತ್ಯಕ್ಷನಾಗಿದ್ದಾನೆ ಅನ್ನೋದು ಹಿಂದೂಗಳ ವಾದ. ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ವಿಗ್ರಹಗಳನ್ನು ತೆಗೆಯುವಂತೆ ಆದೇಶಿಸಿತು. ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಭಯದಿಂದಾಗಿ ಆದೇಶವನ್ನು ಜಾರಿಗೊಳಿಸಲಿಲ್ಲ.
1950: ಫೈಜಾಬಾದ್ ಸಿವಿಲ್ ನ್ಯಾಯಾಲಯದಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲಾಯಿತು-ಒಂದು ವಿವಾದಿತ ಭೂಮಿಯಲ್ಲಿ ಶ್ರೀರಾಮನ ಪೂಜೆಗೆ ಅನುಮತಿ ಕೋರಿ ಮತ್ತು ಇನ್ನೊಂದು ವಿಗ್ರಹಗಳನ್ನು ಸ್ಥಾಪಿಸಲು ಅನುಮತಿ ಕೋರಿ.
1961: ವಿವಾದಿತ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ವಿಗ್ರಹಗಳನ್ನು ತೆಗೆದುಹಾಕಲು ಒತ್ತಾಯಿಸಿ ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಅರ್ಜಿ ಸಲ್ಲಿಸಿತು.
1984: 1986ರ ಫೆಬ್ರವರಿ 1ರಂದು ಫೈಜಾಬಾದ್ ಜಿಲ್ಲಾ ನ್ಯಾಯಾಲಯ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಿತು, ಬೇಲಿಯನ್ನು ತೆರವುಗೊಳಿಸಲು ಆದೇಶಿಸಲಾಯ್ತು.
1992: 1992ರ ಡಿಸೆಂಬರ್ 6 ರಂದು ವಿಶ್ವ ಹಿಂದೂ ಪರಿಷತ್ ಮತ್ತು ಶಿವಸೇನೆ ಸೇರಿದಂತೆ ಸಾವಿರಾರು ಹಿಂದೂ ಕಾರ್ಯಕರ್ತರು ವಿವಾದಿತ ಕಟ್ಟಡವನ್ನು ಕೆಡವಿದಾಗ ವಿವಾದ ಹಿಂಸಾರೂಪಕ್ಕೆ ತಿರುಗಿತು. ಇದು ರಾಷ್ಟ್ರವ್ಯಾಪಿ ಕೋಮುಗಲಭೆಗೆ ಕಾರಣವಾಯಿತು ಮತ್ತು ಸಾವಿರಾರು ಜನರು ಜೀವ ಕಳೆದುಕೊಂಡರು.
2002: ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಗೋಧ್ರಾ ರೈಲು ಸುಟ್ಟ ಘಟನೆಯು ಗುಜರಾತ್‌ನಲ್ಲಿ ಗಲಭೆಗೆ ಕಾರಣವಾಯಿತು. ಈ ಘಟನೆಯಲ್ಲಿ 2,000 ಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿದ್ದರು.
2010: ಅಲಹಾಬಾದ್ ಹೈಕೋರ್ಟ್ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ರಾಮ್ ಲಲ್ಲಾ ವಿರಾಜಮಾನ್ ಮತ್ತು ನಿರ್ಮೋಹಿ ಅಖಾಡಾ ನಡುವೆ ಮೂರು ಸಮಾನ ಭಾಗಗಳಾಗಿ ವಿಂಗಡಿಸಿತು.
2011: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತು.
2017: ಸುಪ್ರೀಂ ಕೋರ್ಟ್ ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಕ್ಕೆ ಕರೆ ನೀಡಿತು.
2019: 2019ರ ಮಾರ್ಚ್ 8 ರಂದು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗಾಗಿ ಪ್ರಕರಣವನ್ನು ಉಲ್ಲೇಖಿಸಿತು ಮತ್ತು ಎಂಟು ವಾರಗಳಲ್ಲಿ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುವಂತೆ ಆದೇಶಿಸಿತು.
ಮಧ್ಯಸ್ಥಿಕೆ ಸಮಿತಿಯು ನಿರ್ಣಯವನ್ನು ಸಾಧಿಸದೆ ಆಗಸ್ಟ್ 2, 2019 ರಂದು ತನ್ನ ವರದಿಯನ್ನು ಮಂಡಿಸಿತು. ನಂತರ ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದ ಕುರಿತು ದೈನಂದಿನ ವಿಚಾರಣೆಯನ್ನು ಪ್ರಾರಂಭಿಸಿತು. ಆಗಸ್ಟ್ 16, 2019 ರಂದು ವಿಚಾರಣೆ ಪೂರ್ಣಗೊಂಡ ನಂತರ, ತೀರ್ಪನ್ನು ಕಾಯ್ದಿರಿಸಲಾಯಿತು.
2019ರ ನವೆಂಬರ್ 9: ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ರಾಮ ಜನ್ಮಭೂಮಿ ಪರವಾಗಿ ತೀರ್ಪು ನೀಡಿತು. ವಿವಾದಿತ ಭೂಮಿಯಲ್ಲಿ 2.77 ಎಕರೆಯನ್ನು ಹಿಂದೂಗಳಿಗೆ ನೀಡಿತು ಮತ್ತು ಹೆಚ್ಚುವರಿ 5 ಎಕರೆಯನ್ನು ಮಸೀದಿಗೆ ಪ್ರತ್ಯೇಕವಾಗಿ ಮೀಸಲಿಟ್ಟಿತು.
2020: 2020ರ ಮಾರ್ಚ್ 25 ರಂದು, 28 ವರ್ಷಗಳ ನಂತರ ರಾಮ್ ಲಲ್ಲಾನ ವಿಗ್ರಹಗಳನ್ನು ಗುಡಾರದಿಂದ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು. ಆಗಸ್ಟ್ 5 ರಂದು ದೇವಾಲಯದ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನಡೆಯಿತು.
2023: ಅಯೋಧ್ಯೆಯಲ್ಲಿ ರಾಮ ಲಲ್ಲಾನ ಭವ್ಯ ಮಂದಿರ ನಿರ್ಮಾಣವಾಗಿದೆ.
2024: ಜನವರಿ 22ರಂದು ದೇವಾಲಯ ಲೋಕಾರ್ಪಣೆಯಾಗಲಿದೆ. ದಶಕಗಳಿಂದ ವ್ಯಾಪಿಸಿರುವ ವಿವಾದಕ್ಕೆ ಅಂತ್ಯ ಬೀಳಲಿದ್ದು, ರಾಮ್ ಲಲ್ಲಾನ ಪೂಜೆ ನೆರವೇರಲಿದೆ.