ಬೆಂಗಳೂರು: ಕಿಡ್ನ್ಯಾಪರ್ಸ್ ಗೆ ಸಾಥ್ ನೀಡಿದ ಆರೋಪದಲ್ಲಿ ಪ್ರೊಬೇಶನರಿ ಪಿ ಎಸ್ ಐ ಓರ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿದ್ಧಾರೂಢ ಬಿಜ್ಜಣ್ಣನವರ್ ಬಂಧಿತ ಆರೋಪಿ. ಇದೇ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಅಲ್ಲಾಬಾಕಾಶ್ ಹಾಗೂ ರಾಜ್ ಕಿಶೋರ್ ನನ್ನು ಕೂಡ ಬಂಧಿಸಿದ್ದಾರೆ.
ಮಡಿವಾಳ ಠಾಣೆಯಲ್ಲಿ ಪ್ರೊಬೇಶನರಿ ಪಿ ಎಸ್ ಐ ಆಗಿ ಸಿದ್ಧಾರೂಢ ಬಿಜ್ಜಣ್ಣನವರ್ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರಾಜ್ ಕಿಶೋರ್ ಎಂಬಾತ ತಾನು ಹೋಂ ಗಾರ್ಡ್ ಎಂದು ಪರಿಚಯಿಸಿಕೊಂಡಿದ್ದಾನೆ. ಹೀಗೆ ಇಬ್ಬರ ನಡುವೆ ಸ್ನೇಹ ಆರಂಭವಾಗಿದೆ. ಒಂದೊಮ್ಮೆ ರಾಜ್ ಕಿಶೋರ್, ತನ್ನ ಅಣ್ಣನಿಗೆ ಕಾರ್ತಿಕ್ ಎಂಬಾತ ಹಣ ಕೊಡುವುದಿದೆ. ನೀವು ಬಂದು ಹಣ ಕೊಡಿಸಿ ಎಂದು ಸಿದ್ಧಾರೂಢಗೆ ಕೇಳಿಕೊಂಡಿದ್ದ. ಆತನ ಮಾತು ನಂಬಿ ಸಿದ್ಧಾರೂಢ ಹಾಗೂ ಕಾನ್ಸ್ ಟೇಬಲ್ ಅಲ್ಲಾಬಾಕಾಸ್ ಸ್ಥಳಕ್ಕೆ ಹೋಗಿದ್ದಾರೆ.
ಬಳಿಕ ಕಾರ್ತಿಕ್ ನನ್ನು ಹೆಚ್ ಎಸ್ ಆರ್ ಲೇಔಟ್ ನಿಂದ ಕಿಡ್ನ್ಯಾಪ್ ಮಾಡಿ ಕೆ ಜಿ ಹಳ್ಳಿಗೆ ಕರೆತಂದು ಒಂದುವರೆ ಕೋಟಿ ಕ್ರಿಪ್ಟೋ ಕರೆನ್ಸಿ ಮತ್ತು 20 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹೆದರಿದ ಕಾರ್ತಿಕ್ ಆರೋಪಿಗಳ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿದ್ದಾನೆ. ಕೆ.ಜಿ ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
ಇದೀಗ ಪ್ರಕರಣವನ್ನು ಪತ್ತೆ ಮಾಡಿದ ಸಿಸಿಬಿ ಪೊಲೀಸರು ಪ್ರೊಬೇಶನರಿ ಪಿಎಸ್ ಐ, ಕಾನ್ಸ್ ಟೇಬಲ್ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರ ಅಕೌಂಟ್ ನಿಂದ 20 ಲಕ್ಷ ಹಣ ಹಾಗೂ ಕ್ರಿಪ್ಟೋ ಕರೆನ್ಸಿ ವಶಕ್ಕೆ ಪಡೆದಿದ್ದಾರೆ.