ಬೆಂಗಳೂರು: ಜಾತಿ ಆಧಾರಿತ ಜನಗಣತಿ ವರದಿ ಸ್ವೀಕಾರಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ನವೆಂಬರ್ 25 ರಂದು ಮುಕ್ತಾಯವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರದ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
2015ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ತಿಳಿಯಲು 164 ಕೋಟಿ ರೂ. ಖರ್ಚು ಮಾಡಿ ಗಣತಿ ಮಾಡಿದ್ದು, ಅದರಲ್ಲಿ ಜಾತಿ ಮತ್ತು ಉಪಜಾತಿಗಳ ಕುರಿತು ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷ ಕಾಂತರಾಜು ಅವರ ನೇತೃತ್ವದಲ್ಲಿ ಗಣತಿ ನಡೆಸಲಾಗಿತ್ತು.
ವರದಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಪರ, ವಿರೋಧ ಚರ್ಚೆಗಳು ನಡೆಯುತ್ತಿದ್ದು, ವರದಿ ಸ್ವೀಕರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರ ಅವಧಿಯನ್ನು ಒಂದು ತಿಂಗಳು ಮುಂದುವರೆಸಲು ನಿರ್ಧರಿಸಲಾಗಿದೆ.