ಬೆಂಗಳೂರು: ರೈತರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಅಮಾಯಕರ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ 300 ರಿಂದ 400 ಪ್ರಕರಣ ಹಿಂಪಡೆಯಬೇಕೆಂಬ ಮನವಿ ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ಗೃಹ ಕಚೇರಿಯಲ್ಲಿ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಏಕಾಏಕಿ ಪ್ರಕರಣಗಳನ್ನು ವಾಪಸ್ ಪಡೆಯುವುದಿಲ್ಲ. ಇದಕ್ಕಾಗಿ ನಮ್ಮ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದು, ಅಲ್ಲಿ ಪರಿಶೀಲನೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಕರಣಗಳನ್ನು ಹಿಂಪಡೆಯಬೇಕೆ ಬೇಡವೇ ಎಂಬುದರ ಕುರಿತಾಗಿ ಪೊಲೀಸರು ಶಿಫಾರಸಿನೊಂದಿಗೆ ಕಡತ ಸಲ್ಲಿಸಲಿದ್ದು, ಉಪ ಸಮಿತಿ ಪರಿಶೀಲಿಸಿ ಸೂಕ್ತವಾಗಿದ್ದಲ್ಲಿ ವಾಪಸ್ ಪಡೆಯುವ ಬಗ್ಗೆ ಸಂಪುಟಕ್ಕೆ ಶಿಫಾರಸು ಮಾಡಲಾಗುತ್ತದೆ. ಇಲ್ಲದಿದ್ದಲ್ಲಿ ಪ್ರಕರಣ ಮುಂದುವರಿಸಲು ಪೊಲೀಸರಿಗೆ ತಿಳಿಸಲಾಗುತ್ತದೆ. ಪ್ರಕರಣ ಹಿಂಪಡೆಯುವ ವಿಚಾರದಲ್ಲಿ ಸ್ಪಷ್ಟವಾಗಿ ಮಾರ್ಗಸೂಚಿ ಪಾಲನೆ ಮಾಡಲಾಗುತ್ತದೆ. ರಾಜ್ಯದಾದ್ಯಂತ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.