ಬೆಂಗಳೂರು: ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ 65 ಲಕ್ಷ ರೂಪಾಯಿ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಪ್ರಥಮ ದರ್ಜೆ ಸಹಾಯಕ ಸಂತೋಷ್ ಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ 16 ವರ್ಷಗಳಿಂದ ಜಾರಿ ನಿರ್ದೇಶನಾಲಯದ ಸಂಗ್ರಹ ಶಾಖೆಯಲ್ಲಿ ಸಂತೋಷ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳ ಗಮನಕ್ಕೆ ಬಾರದೆ ಹಣ ದುರುಬಳಕೆ ಮಾಡಿಕೊಂಡಿದ್ದಾರೆ. ಆಡಳಿತ ವಿಭಾಗದ ಅಧಿಕಾರಿ ಕಿರಣ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಸಂತೋಷ್ ಅನದಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಶಂಕೆ ಬಂದ ಕಾರಣ ಕಚೇರಿ ದಾಖಲೆ ಪರಿಶೀಲಿಸಿದಾಗ ಹಣ ದುರುಪಯೋಗವಾಗಿರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಇಲಾಖಾ ಮಟ್ಟದ ತನಿಖೆ ನಡೆಸಿದಾಗ ಅವರು ತಪ್ಪು ಮಾಡಿರುವುದು ಗೊತ್ತಾಗಿದೆ. ಕೆಲವು ಕಡತಗಳನ್ನು ಸಂತೋಷ್ ನಾಪತ್ತೆ ಮಾಡಿದ್ದಾರೆ. ಹೀಗಾಗಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.