ಕಲಬುರಗಿ: ಕಾಂಗ್ರೆಸ್ ನಾಯಕರು ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲಿನ ಯಾವ ಕೇಸ್ ವಾಪಾಸ್ ಪಡೆದಿದ್ದಾರೆ? ವಾಪಾಸ್ ಪಡೆಯಲು ನನ್ನ ಮೇಲೆ ಯಾವ ಕೇಸ್ ಇದೆ? ಎಂದು ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿ.ಟಿ.ರವಿ, ನನ್ನ ಮೇಲಿನ ಯಾವ ಕೇಸ್ ವಾಪಾಸ್ ಪಡೆದಿದ್ದಾರೆ ಎಂದು ದಾಖಲೆ ತೋರಿಸಿದರೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದರು.
ನನ್ನ ಮೇಲೆ ಯಾವುದೇ ಕೇಸ್ ಇಲ್ಲ. ಸಚಿವ ಸಂಪುಟ ಸಭೆಯಲ್ಲಿ ನನ್ನ ಮೇಲಿನ ಯಾವ ಕೇಸ್ ನ್ನು ವಾಪಾಸ್ ಪಡೆದಿಲ್ಲ. ನನ್ನ ಮೇಲೆ ಯಾವ ಕೇಸ್ ಇದೆ? ಯಾವುದನ್ನು ವಾಪಾಸ್ ಪಡೆದಿದ್ದಾರೆ ಎಂಬುದನ್ನು ಪ್ರಿಯಾಂಕ್ ಖರ್ಗೆ, ಹೆಚ್.ಕೆ.ಪಾಟೀಲ್ ಸ್ಪಷ್ಟ ಪಡಿಸಲಿ. ನನ್ನ ಚಾಲೇಂಜ್ ಸ್ವೀಕರಿಸಲಿ ಎಂದು ಹೇಳಿದರು.
ಅವರ ಹೇಳಿಕೆಯನ್ನು ಮೊದಲು ರುಜುವಾತು ಮಾಡಲಿ, ಇಲ್ಲವಾದಲ್ಲಿ ಜನರ ಮುಂದೆ ಕ್ಷಮೆ ಕೇಳಲಿ. ಜನರ ದಾರಿ ತಪ್ಪಿಸುವ ಹೇಳಿಕೆ ನೀಡುವುದು ಬೇಡ ಎಂದು ಕಿಡಿಕಾರಿದರು.