ಬೆಂಗಳೂರು: ಅಸ್ಸಾಂ ಯುವ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮೇಲಿನ ದೌರ್ಜನ್ಯ, ಗೌರವಕ್ಕೆ ಧಕ್ಕೆ ತಂದ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದಾಗಿ ಬಿ.ವಿ. ಶ್ರೀನಿವಾಸ್ ಬಂಧನ ಭೀತಿಯಲ್ಲಿದ್ದು ತಲೆಮರಸಿಕೊಂಡಿದ್ದಾರೆ.
ಬೆಂಗಳೂರಿನ ಸಿಸಿಹೆಚ್ 72ರ ನ್ಯಾಯಾಧೀಶರಾದ ಕೆ.ಎಸ್. ಜ್ಯೋತಿಶ್ರೀ ಅವರು ಬಿ.ವಿ. ಶ್ರೀನಿವಾಸ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಸಂತ್ರಸ್ತೆಯ ಪರ ಹಿರಿಯ ನ್ಯಾಯವಾದಿ ಕೆ.ಎಸ್. ಫಣೀಂದ್ರ ಸತ್ಯ ಹೊರತರಲು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ. ಆರೋಪಿ ಪ್ರಭಾವಿಯಾಗಿರುವುದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಶ್ರೀನಿವಾಸ್ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ, ದೂರುದಾರರಿಗೆ ಪಕ್ಷದಲ್ಲಿ ಸ್ಥಾನಮಾನ ಕೊಡಿಸಲಾಗಿದ್ದರೂ ದುರುದ್ದೇಶದಿಂದ ವಿರೋಧಿಗಳ ಜೊತೆ ಕೈಜೋಡಿಸಿ ಆರೋಪ ಮಾಡಲಾಗಿದೆ. ಸಾಕಷ್ಟು ದಿನಗಳ ನಂತರ ಪ್ರಕರಣ ದಾಖಲಿಸಿದ್ದು, ಅಸ್ಸಾಂ ಪೋಲೀಸರು ಶ್ರೀನಿವಾಸ್ ಅವರನ್ನು ಬಂಧಿಸಲು ಕರ್ನಾಟಕದಲ್ಲಿ ಬೇಡುಬಿಟ್ಟಿದ್ದಾರೆ. ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಶ್ರೀನಿವಾಸ್ ತನಿಖೆಗೆ ಹಾಜರಾಗುತ್ತಾರೆ ಎಂದು ತಿಳಿಸಿದ್ದಾರೆ.
2023ರ ಏಪ್ರಿಲ್ 19 ರಂದು ಅಸ್ಸಾಂನ ಕಾಮರೂಪ ಜಿಲ್ಲೆಯ ದಿಸ್ ಪುರ ಠಾಣೆಯಲ್ಲಿ ಶ್ರೀನಿವಾಸ್ ವಿರುದ್ಧ ದೂರು ದಾಖಲಿಸಲಾಗಿದೆ.