
ಬೆಂಗಳೂರು: ರಾಜ್ಯದಲ್ಲಿ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಇದೆಯಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದ ಜನರು ಬೆಲೆ ಏರಿಕೆ ಬಗ್ಗೆ 2 ದಿನಗಳಲ್ಲಿ ಮರೆತು ಬಿಡ್ತಾರೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮೂರನೇ ದಿನ ಅಡ್ಜೆಸ್ಟ್ ಆಗ್ತಾರೆ. ಇದೇ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹಾಕಿದಾಗ ಪ್ರತಿಭಟನೆ ಮಾಡಿದ್ರಾ? ಇಲ್ಲಾ. ಅದಕ್ಕೆ ಅಡ್ಜಸ್ಟ್ ಆದರು. ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದ್ದಾರೆ. ಗೈಡ್ ಲೈನ್ ವ್ಯಾಲ್ಯೂ, ಮದ್ಯದ ದರ ಏರಿಕೆಯಾಗಿದೆ. ನೀರಿನ ದರವೂ ಏರಿಕೆಯಾಗುತ್ತಿದೆ. ಇನ್ನು ಹಾಲಿನ ದರ ಏನಾಗುತ್ತದೆ ಎಂಬ ಬಗ್ಗೆ ಸರ್ಕಾರವೇ ಹೇಳುತ್ತಿದೆ. ಒಟ್ಟಾರೆ ಹೊಸ ವರ್ಷದಲ್ಲಿ ನಾಡಿನ ಜನರು ಬೆಲೆ ಏರಿಕೆಗೆ ತಯಾರಾಗಿರಿ ಎಂಬ ಸಂದೇಶವನ್ನು ಸರ್ಕಾರ ಕೊಟ್ಟಿದೆ ಎಂದು ಗರಂ ಆದರು.
ಸಧ್ಯಕ್ಕೆ ನಾನು ಯಾವುದಕ್ಕೂ ಟೀಕೆ ಮಾಡಲ್ಲ. ಟೀಕೆ ಮಾಡಿದರೆ ಇಲ್ಲಿ ಕೇಳುವವರು ಯಾರು? ರಾಜ್ಯದಲ್ಲಿ ಸರ್ಕಾರ ಇಲ್ಲ. ಸ್ವೇಚ್ಛಾಚಾರದಂತೆ ಆಡಳಿತ ನಡೆಸುತ್ತಿದ್ದಾರೆ. ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ. ಜನರ ಕಷ್ಟ ಸುಖ ಇವರಿಗೆ ಬೇಕಾಗಿಲ್ಲ. ಜನರ ಸಮಸ್ಯೆ ಯಾರು ಕೇಳುತ್ತಾರೆ? ಎಂದು ಪ್ರಶ್ನಿಸಿದರು.
ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಕೈಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಬಹಳ ವಿಷಯ ಮಾತನಾಡಬೇಕಿದೆ. ಒಂದು ವಾರ, 10 ದಿನ ಕಳೆಯಲಿ ಆಮೇಲೆ ಮಾತನಾಡುತ್ತೇನೆ ಎಂದರು.