ಬೆಂಗಳೂರು: ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರ ಇದೀಗ ಸಾರಿಗೆ ದರವನ್ನೂ ಏರಿಸುವ ಬಗ್ಗೆ ಸುಳಿವು ನೀಡಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ದುಬಾರಿ ದುನಿಯಾದಲ್ಲಿ ಹಣ್ಣು-ತರಕಾರಿ ಬೆಲೆಗಳು ಗಗನಮುಖಿಯಾಗಿವೆ. ಈ ಮಧ್ಯೆ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ದರವನ್ನು ಹೆಚ್ಚಿಸಿ ಸಾಮಾನ್ಯ ಜನರಿಗೆ ದರ ಏರಿಕೆ ಬಿಸಿ ಮುಟ್ಟಿಸಿದೆ. ಇದೀಗ ಬಸ್ ಪ್ರಯಾಣದರವೂ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.
ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಬಸ್ ದರ ಏರಿಸುವ ನಿಟ್ಟಿನಲ್ಲಿ ಸಾರಿಗೆ ನಿಗಮಗಳಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಳೆದ ನಾಲ್ಕು ವರ್ಷಗಳಿಂದ ಬಸ್ ಪ್ರಯಾಣದರವನ್ನು ಏರಿಸಿಲ್ಲ. ಈವರೆಗೂ ಪ್ರಯಾಣ ದರ ಹೆಚ್ಚಳ ಮಾಡುವಂತೆ ಯಾವುದೇ ಪ್ರಸ್ತಾವನೆಯೂ ಬಂದಿಲ್ಲ. ಒಂದು ವೇಳೆ ಪ್ರಸ್ತಾವನೆ ಬಂದರೆ ಈ ನಿಟ್ಟಿನಲ್ಲಿ ಪರಿಶೀಲಿಸಿ ನಿರ್ಧರಿದ್ಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಬಸ್ ಟಿಕೆಟ್ ದರಗಳು ಏರಿಕೆಯಾಗುವ ಸಾಧ್ಯತೆ ಬಗ್ಗೆ ಸಚಿವರು ಸುಳಿವು ನೀಡಿದಂತಿದೆ.