ಗಾಜಿಯಾಬಾದ್ ನ ದೆಹಲಿ- ಮೀರತ್ ಎಕ್ಸ್ ಪ್ರೆಸ್ ವೇನಲ್ಲಿ ಜರುಗಿದ ಭೀಕರ ಅಪಘಾತ ಪ್ರಕರಣದಲ್ಲಿ ಆರು ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾದ ಬಸ್ ಗೆ ಈ ಹಿಂದೆಯೇ 15 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಚಲನ್ ನೀಡಲಾಗಿತ್ತು ಎಂಬುದು ಗೊತ್ತಾಗಿದೆ. ಇದರಲ್ಲಿ ರಾಂಗ್ ರೂಟಲ್ಲಿ ಬಂದಿದ್ದಕ್ಕಾಗಿ 3 ಬಾರಿ ಚಲನ್ ನೀಡಲಾಗಿತ್ತು.
ವೇವ್ ಸಿಟಿಯ ಹೆಚ್ಚುವರಿ ಪೊಲೀಸ್ ಕಮಿಷನರ್ (ಎಸಿಪಿ), ರವಿ ಪ್ರಕಾಶ್ ಸಿಂಗ್ ಮಾತನಾಡಿ, ರಾಂಗ್ ಸೈಡ್ ನಲ್ಲಿ ಚಾಲನೆ ಮಾಡಿದ್ದಕ್ಕಾಗಿ ಮೂರು ಬಾರಿ ಸೇರಿದಂತೆ ಒಟ್ಟು 15 ಬಾರಿ ಆನ್ಲೈನ್ನಲ್ಲಿ ಬಸ್ಗೆ ಚಲನ್ ನೀಡಲಾಗಿದೆ.
ದೆಹಲಿ-ಮೀರತ್ ಎಕ್ಸ್ ಪ್ರೆಸ್ವೇಯಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಜಿಪುರ ಗಡಿಯ ಬಳಿ ಸಿಎನ್ಜಿ ತುಂಬಿಸಿಕೊಂಡ ನಂತರ ಬಸ್ ಎಕ್ಸ್ ಪ್ರೆಸ್ವೇಯ ರಾಂಗ್ ರೂಟಲ್ಲಿ ಚಲಿಸಿದೆ. ಬಸ್ ನೋಯ್ಡಾದ ಬಾಲ್ ಭಾರತಿ ಶಾಲೆಗೆ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಎಂಟು ಜನರಿದ್ದ ಎಸ್ಯುವಿಗೆ ರಾಂಗ್ ರೂಟಲ್ಲಿ ಬಂದ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು.
ಬಸ್ನ ಚಾಲಕ ಮತ್ತು ಮಾಲೀಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಘಟನೆಯಲ್ಲಿ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬಸ್ ಮಾಲೀಕ ಸಂದೀಪ್ ಚೌಧರಿ ಅವರನ್ನು ಗೌತಮ್ ಬುದ್ಧ ನಗರದ ಹೌಸಿಂಗ್ ಸೊಸೈಟಿಯ ಫ್ಲಾಟ್ನಿಂದ ಬಂಧಿಸಿದರೆ, ದೆಹಲಿ ಮೀರತ್ ಎಕ್ಸ್ ಪ್ರೆಸ್ವೇ (ಎನ್ಎಚ್ 9) ನಲ್ಲಿ ಜರುಗಿದ ಅಪಘಾತ ಸ್ಥಳದಲ್ಲೇ ಚಾಲಕ ಪ್ರೇಮ್ ಪಾಲ್ ನನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸಮಯದಲ್ಲಿ ಬಸ್ ನಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಮೀರತ್ನಿಂದ ಗುರುಗ್ರಾಮ್ಗೆ ಹೊರಟಿದ್ದ ಎಸ್ಯುವಿಯಲ್ಲಿ ಕುಟುಂಬವೊಂದು ಪ್ರಯಾಣಿಸುತ್ತಿತ್ತು.
ಮೃತರನ್ನು ನರೇಂದ್ರ (45), ಅವರ ಪತ್ನಿ ಅನಿತಾ (40), ಮಕ್ಕಳಾದ ದೀಪಾಂಶು (15) ಮತ್ತು ಹಿಮಾಂಶು (12), ಸೊಸೆ ವಂಶಿಕಾ (7) ಮತ್ತು ಸೊಸೆ ಬಬಿತಾ (35) ಎಂದು ಗುರುತಿಸಲಾಗಿದೆ.
ನರೇಂದ್ರ ಅವರ ಸಹೋದರ ಧರ್ಮೇಂದ್ರ (40) ಮತ್ತು ಅವರ ಮಗ ಕಾರ್ತಿಕ್ ಅವರಿಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.