
ಕೊಪ್ಪಳ: ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ಪ್ರಯಣಿಕನೊಬ್ಬ ಕುಡಿದ ಮತ್ತಿನಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿ ಡಿಪೋ ನಿರ್ವಾಹಕ ಹನುಮಪ್ಪ ಮೇಲೆ ಪ್ರಯಾಣಿಕ ಶ್ರೀಧರ್ ಹಲ್ಲೆ ನಡೆಸಿದ್ದು, ಟಿಕೆಟ್ ದರ ಯಾಕೆ ಹೆಚ್ಚಳ ಮಾಡಿದ್ದೀರಿ? ಯಾರನ್ನು ಕೇಳಿ ದರ ಹೆಚ್ಚಿಸಿದ್ದೀರಿ? ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಿಂದ ಗಂಗಾವತಿಗೆ ಬಸ್ ತೆರಳುತ್ತಿತ್ತು. ಕುಡಿದ ಮತ್ತಿನಲ್ಲಿದ್ದ ಶ್ರೀಧರ್ ಹಲಗಿಯಲ್ಲಿ ಬಸ್ ಹತ್ತಿದ್ದಾನೆ. ಹನುಮನಹಳ್ಳಿಗೆ ಹೋಗಬೇಕು ಎಂದು ಶ್ರೀಧರ್ ಹೇಳಿದ್ದಕ್ಕೆ ಕಂಡಕ್ಟರ್ ಹನುಮಪ್ಪ 30 ರೂಪಾಯಿ ಟಿಕೆಟ್ ನೀಡಿದ್ದಾರೆ. ಈ ಹಿಂದೆ 26 ರೂಪಾಯಿ ಇದ್ದ ಟಿಕೆಟ್ ಈಗ 30 ರೂಪಾಯಿ ಹೇಗಾಯಿತು? ಯಾರನ್ನು ಕೇಳಿ ಟಿಕೆಟ್ ದರ ಹೆಚ್ಚಿಸಿದ್ದೀರಿ ಎಂದು ಗಲಾಟೆ ಮಾಡಿದ್ದಾನೆ. ಬಸ್ ನ್ನು ವಿರುಪಾಪುರ ಗಡ್ಡಿ ಬಳಿ ನಿಲ್ಲಿಸಿದಾಗ ಶ್ರೀಧರ್ ಕಂಡಕ್ಟರ್ ನನ್ನು ಬಸ್ ನಿಂದ ಕೆಳಗೆ ಎಳೆದೊಯ್ದು ಕೈಗೆ ಸಿಕ್ಕ ಕಲ್ಲಿನಿಂದ ಕಂಡಕ್ಟರ್ ಗೆ ಹೊಡೆದಿದ್ದಾನೆ. ಕಂಡಕ್ಟರ್ ಬಲಗಣ್ಣು, ಹಣೆಯ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಗಾಯಾಳು ಹನುಮಪ್ಪ ಗಂಗಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಗಾವತಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಶ್ರೀಧರ್ ನನ್ನು ಬಂಧಿಸಿದ್ದಾರೆ.