ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ಜನವರಿ 31 ರಿಂದ ಆರಂಭವಾಗಲಿದೆ. ನೂತನ ಸಂಸತ್ ಭವನದ ಲೋಕಸಭೆ ಸಭಾಂಗಣದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ.
ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಜನವರಿ 3ರಿಂದ ಆರಂಭವಾಗಲಿದೆ. ಮೊದಲ ದಿನ ರಾಷ್ಟ್ರಪತಿ ಭಾಷಣದ ನಂತರ ಆರ್ಥಿಕ ಸಮೀಕ್ಷಾ ವರದಿಯನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಫೆಬ್ರವರಿ 3 ಮತ್ತು 4ರಂದು ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವಕಾಶ ನೀಡಲಾಗಿದೆ. ಫೆಬ್ರವರಿ 6ರಂದು ಪ್ರಧಾನಿ ಮೋದಿ ಚರ್ಚೆಗೆ ಉತ್ತರ ನೀಡುವ ಸಾಧ್ಯತೆ ಇದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಜನವರಿ 30ರಂದು ಬಜೆಟ್ ಅಧಿವೇಶನ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.
ಬಜೆಟ್ ಅಧಿವೇಶನದ ಮೊದಲನೆಯ ಭಾಗ ಜನವರಿ 31 ರಿಂದ ಫೆಬ್ರವರಿ 13ರವರೆಗೆ ನಡೆಯಲಿದೆ. ಮಾರ್ಚ್ 10ರಿಂದ ವಿವಿಧ ಇಲಾಖೆಗಳ ಸಚಿವರಿಂದ ಅನುದಾನದ ಬೇಡಿಕೆ ಚರ್ಚೆ ನಡೆಯಲಿದ್ದು, ಏಪ್ರಿಲ್ 4ರಂದು ಅಧಿವೇಶನ ಮುಕ್ತಾಯವಾಗಲಿದೆ. ಜನವರಿ 31 ರಿಂದ ಏಪ್ರಿಲ್ 4ರವರೆಗೆ ಒಟ್ಟು 27 ದಿನಗಳ ಕಾಲ ಸಂಸತ್ ಬಜೆಟ್ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.