
ನವದೆಹಲಿ: ಭಾರಿ ನಿರೀಕ್ಷೆಗಳ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ಮೋದಿ -3 ಸರ್ಕಾರದ ಎರಡನೇ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿದೆ.
ಬಜೆಟ್ ನಲ್ಲಿ ಬಡವರು, ಮಧ್ಯಮ ವರ್ಗದವರು, ಮಹಿಳೆಯರು, ಯುವಕರಿಗೆ ಭರ್ಜರಿ ಕೊಡುಗೆ ನೀಡುವ ಸುಳಿವನ್ನು ಪ್ರಧಾನಿ ಮೋದಿ ನೀಡಿದ್ದು, ಬಜೆಟ್ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರೈತರಿಗೆ ನೀಡುತ್ತಿರುವ ವಾರ್ಷಿಕ 6,000ರೂ. ಸಹಾಯಧನದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ರೈತರ ಆದಾಯ ಹೆಚ್ಚಳಕ್ಕೆ ಕ್ರಮ, ಸುಲಭ ಸಾಲ ಸೌಲಭ್ಯ, ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ, ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ ಸೇರಿದಂತೆ ತಂತ್ರಜ್ಞಾನ ಬಳಕೆಗೆ ಬಜೆಟ್ ನಲ್ಲಿ ಹಲವು ಕ್ರಮ ನಿರೀಕ್ಷಿಸಲಾಗಿದೆ.
ಇನ್ನು ಆರ್ಥಿಕ ಪ್ರಗತಿಯ ಮಂದಗತಿಯ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಜನರ ಖರೀದಿ ಶಕ್ತಿ ಹೆಚ್ಚಿಸಲು ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಘೋಷಣೆ ಸಾಧ್ಯತೆ ಇದೆ. ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ನಲ್ಲಿ ಮಹಿಳಾ ಕೇಂದ್ರೀತ, ಯುವಜನ ಕೇಂದ್ರಿತ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಧಾನಿಯವರು ತಮ್ಮ ಮಾತುಗಳಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ.