ರೋಜ್ ಗಾರ್ ಮೇಳದಡಿ ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡಿರುವ 51,000ಕ್ಕೂ ಅಧಿಕ ಮಂದಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಪತ್ರ ವಿತರಿಸಿದರು.
ಉದ್ಯೋಗ ಮೇಳ ಮುಖಾಂತರ ಕೇಂದ್ರ ಸರ್ಕಾರ ಈಗಾಗಲೇ 10 ಲಕ್ಷ ನೇಮಕಾತಿಗಳನ್ನು ಮಾಡಿಕೊಂಡಿದ್ದು, ಇಂದು ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡಿರುವ 51,000ಕ್ಕೂ ಅಧಿಕ ಮಂದಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಪತ್ರ ವಿತರಿಸಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ನೇಮಕಾತಿ ಪತ್ರಗಳ ವಿತರಣೆ ನಡೆದಿದೆ.
ನಂತರ ಮಾತನಾಡಿದ ಪ್ರಧಾನಿ ಮೋದಿ ಈ ನೇಮಕಾತಿ ಪತ್ರಗಳು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಫಲಿತಾಂಶವಾಗಿದೆ. ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ರಾಷ್ಟ್ರ ಅಭಿವೃದ್ಧಿಯ ಆ ಅಂಶವನ್ನು ನೀವು ಸೇರಲಿದ್ದೀರಿ” ಎಂದು ಪ್ರಧಾನಿ ಮೋದಿ ಹೇಳಿದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು ವಿಶೇಷ ಆನ್ಲೈನ್ ವ್ಯವಸ್ಥೆಯ ಮುಖಾಂತರ ಖಾಲಿ ಹುದ್ದೆಗಳ ಮತ್ತು ನೇಮಕಾತಿ ಪ್ರಕ್ರಿಯೆಗಳ ಕುರಿತು ಮೇಲ್ವಿಚಾರಣೆ ನಡೆಸುತ್ತಿದೆ.
ಕಳೆದ ವರ್ಷ ಅಕ್ಟೋಬರ್ 22 ರಂದು ಪ್ರಧಾನಿ ಮೋದಿ ಅವರು 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಅಭಿಯಾನದ ಪ್ರಾರಂಭವನ್ನು ಸೂಚಿಸುವ ‘ರೋಜ್ಗಾರ್ ಮೇಳ’ಕ್ಕೆ ಚಾಲನೆ ನೀಡಿದ್ದರು.
“ಭಾರತ ಸರ್ಕಾರದ ಉದ್ಯೋಗಿಗಳಾಗಿ, ನೀವೆಲ್ಲರೂ ದೊಡ್ಡ ಜವಾಬ್ದಾರಿಗಳನ್ನು ಪೂರೈಸಬೇಕು. ನೀವು ಯಾವುದೇ ಸ್ಥಾನದಲ್ಲಿದ್ದರೂ, ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ದೇಶವಾಸಿಗಳ ಜೀವನವನ್ನು ಸುಲಭಗೊಳಿಸುವುದು ನಿಮ್ಮ ಮೊದಲ ಆದ್ಯತೆಯಾಗಿರಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.
ದೇಶಾದ್ಯಂತ 37 ಸ್ಥಳಗಳಲ್ಲಿ ರೋಜ್ಗಾರ್ ಮೇಳ ನಡೆಯುತ್ತಿದೆ. ಈ ಉಪಕ್ರಮವನ್ನು ಬೆಂಬಲಿಸುವ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಾತಿಗಳು ನಡೆಯುತ್ತಿವೆ. ದೇಶಾದ್ಯಂತ ಆಯ್ಕೆಯಾದ ಅಭ್ಯರ್ಥಿಗಳು ಕಂದಾಯ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು / ಇಲಾಖೆಗಳಲ್ಲಿ ಸರ್ಕಾರಕ್ಕೆ ಸೇರಲಿದ್ದಾರೆ.