ಬೆಂಗಳೂರು: ಶಾಲಾ ಪಠ್ಯ ಪುಸ್ತಕ ಪರಿ ಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕನ್ನಡದಲ್ಲಿ 6ರಿಂದ 10ನೇ ತರಗತಿ ಪಠ್ಯದಲ್ಲಿ ಹಲವು ಬದಲಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಮಧು ಬಂಗಾರಪ್ಪ, 6ರಿಂದ 10 ನೇತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಕೆಲ ಬದಲಾವಣೆ ಮಾಡಲಾಗುವುದು. ಸಾವರ್ಕರ್ ಪಾಠ ಕೈಬಿಡಲು ನಿರ್ಧರಿಸಲಾಗಿದ್ದು, ಈ ಬಾರಿ ಸಾವಿತ್ರಿ ಬಾಯಿ ಪುಲೆ ಅವರ ಪಾಠ ಸೇರಿಸಲು ತೀರ್ಮಾನಿಸಲಾಗಿದೆ.
ಪಠ್ಯದಲ್ಲಿ ಹೆಡ್ಗೆ ವಾರ್, ಸೂಲಿಬೆಲೆ ಪಾಠಗಳಿಗೂ ಕೊಕ್ ನೀಡಲಾಗುವುದು. ಅಂಬೇಡ್ಕರ್ ಅವರ ಕವನ, ಪುತ್ರಿ ಇಂದಿರಾಗೆ ನೆಹರು ಪತ್ರವನ್ನು ಸೇರ್ಪಡೆ ಮಾಡಲಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದಾಗಿ ಕೆಲ ಬದಲಾವಣೆಗಳನ್ನು ಪಠ್ಯ ಪುಸ್ತಕದಲ್ಲಿ ಮಾಡಲಾಗುತ್ತಿದೆ. ಆದಷ್ಟು ಬೇಗ ಪಠ್ಯ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.