ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲಾ ಅರ್ಹ ಪಡಿತರ ಚೀಟಿದಾರರಿಗೆ ನವೆಂಬರ್ 29 ರಿಂದ ಪಡಿತರ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರ ಹೊರೆತುಪಡಿಸಿ ಬೇರೆ ಯಾರೊಬ್ಬರ ಬಿಪಿಎಲ್ ಕಾರ್ಡ್ ರದ್ದುಪಡಿಸದಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಅಂತೆಯೇ ಆಹಾರ ಇಲಾಖೆ ಅಧಿಕಾರಿಗಳು ರದ್ದಾಗಿರುವ ಕಾರ್ಡ್ ಗಳನ್ನು ಪುನಃ ಸಕ್ರಿಯಗೊಳಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಒಂದೂವರೆ ತಿಂಗಳ ಹಿಂದೆ ರದ್ದು ಮಾಡಿದ್ದ ಎಲ್ಲಾ ಪಡಿತರ ಚೀಟಿಗಳನ್ನು ನವೆಂಬರ್ 28 ರೊಳಗೆ ಮರು ಸಕ್ರಿಯಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಕಾರ್ಯ ಭರದಿಂದ ಸಾಗಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಯಾವುದೇ ಕಾರಣಕ್ಕೂ ಪಡಿತರ ತಪ್ಪಿಸುವುದಿಲ್ಲ. ಕಾರ್ಡ್ ರದ್ದಾದ ಕಾರಣ ಕಳೆದ ಎರಡು ತಿಂಗಳಿಂದ ಸಿಗದೇ ಇರುವ ಎಲ್ಲಾ ಸೌಲಭ್ಯಗಳು ಅರ್ಹರಿಗೆ ದೊರೆಯಲಿದೆ. ಎಲ್ಲಾ ಅರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮರು ಸಕ್ರಿಯಗೊಳಿಸಲಾಗುತ್ತಿದ್ದು, ಎಂದಿನಂತೆಯೇ ಅಕ್ಕಿ, ಖಾತೆಗೆ ಹಣ ಸೇರಿ ಎಲ್ಲಾ ಸೌಲಭ್ಯಗಳ ದೊರೆಯಲಿದೆ ಎಂದು ಹೇಳಿದ್ದಾರೆ.