alex Certify ಬೌರ್ನ್‌ವಿಟಾ ಆಯ್ತು ಈಗ ನೆಸ್ಲೆ ಸರದಿ, ಭಾರತದ ಮಕ್ಕಳ ಆರೋಗ್ಯದೊಂದಿಗೆ ವಿದೇಶಿ ಕಂಪನಿಯ ಚೆಲ್ಲಾಟ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೌರ್ನ್‌ವಿಟಾ ಆಯ್ತು ಈಗ ನೆಸ್ಲೆ ಸರದಿ, ಭಾರತದ ಮಕ್ಕಳ ಆರೋಗ್ಯದೊಂದಿಗೆ ವಿದೇಶಿ ಕಂಪನಿಯ ಚೆಲ್ಲಾಟ !

ಸ್ವಿಡ್ಜರ್ಲೆಂಡ್‌ನ ಕಂಪನಿ ನೆಸ್ಲೆ ಮತ್ತೊಮ್ಮೆ ವಿವಾದಕ್ಕೀಡಾಗಿದೆ. ಸ್ವಿಸ್ ಕಂಪನಿಗಳ ಮೇಲೆ ನಿಗಾ ಇಡುವ ವೆಬ್ ಸೈಟ್ ‘ಪಬ್ಲಿಕ್ ಐ’ ತನ್ನ ತನಿಖಾ ವರದಿಯಲ್ಲಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ನೆಸ್ಲೆ ಭಾರತದಲ್ಲಿ ಮಾರಾಟವಾಗುವ ಬೇಬಿ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಬಳಸುತ್ತದೆ ಎಂಬುದು ಪತ್ತೆಯಾಗಿದೆ. ಆದರೆ ಯುರೋಪ್, ಬ್ರಿಟನ್ ಮತ್ತು ಜರ್ಮನಿಯಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದೇ ಉತ್ಪನ್ನಗಳನ್ನು ಸಕ್ಕರೆ ಇಲ್ಲದೆ ನೆಸ್ಲೆ ಮಾರಾಟ ಮಾಡುತ್ತಿದೆ. ಭಾರತದ ಬಗೆಗಿನ ಕಂಪನಿಯ ತಾರತಮ್ಯ ಧೋರಣೆ ಈಗ ಬಹಿರಂಗವಾಗಿದೆ. ತನಿಖೆಯಲ್ಲಿ ಕಂಪನಿ ತಪ್ಪಿತಸ್ಥ ಎಂಬುದು ಸಾಬೀತಾದಲ್ಲಿ ಕ್ರಮ ಕೈಗೊಳ್ಳಬಹುದು.

ಭಾರತದ ಬಗ್ಗೆ ತಾರತಮ್ಯ ಏಕೆ ?

ಭಾರತದಲ್ಲಿ ಮಾರಾಟವಾಗುವ ನೆಸ್ಲೆಯ ಬೇಬಿ ಫುಡ್ ಉತ್ಪನ್ನಗಳು, ವಿಶೇಷವಾಗಿ ಬೇಬಿ ಮಿಲ್ಕ್‌ ಮತ್ತು ಸೆರೆಲಾಕ್‌ಗೆ ಸಕ್ಕರೆಯನ್ನು ಬಳಸಲಾಗುತ್ತಿದೆ. ನೆಸ್ಲೆ ಸಂಸ್ಥೆಯ ಈ ನಿರ್ಲಕ್ಷ್ಯದಿಂದಾಗಿ ಮಕ್ಕಳಲ್ಲಿ ಬೊಜ್ಜು ಮತ್ತಿತರ ರೋಗಗಳ ಅಪಾಯ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಭಾರತ ಸೇರಿದಂತೆ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನೆಸ್ಲೆ, ಸಕ್ಕರೆ ಹೊಂದಿರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಆದರೆ ಬ್ರಿಟನ್, ಯುರೋಪ್ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಮಾರಾಟವಾಗುವ ಉತ್ಪನ್ನಗಳಲ್ಲಿ ಸಕ್ಕರೆ ಬಳಸುತ್ತಿಲ್ಲ. ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳಲ್ಲಿ ನೆಸ್ಲೆ ಮಾಡುತ್ತಿರುವ ತಾರತಮ್ಯವೀಗ ಬಯಲಾಗಿದೆ. ನೆಸ್ಲೆ ಭಾರತೀಯ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ.

ಬಡ ದೇಶಗಳ ಮಕ್ಕಳ ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಏಕೆ ?

ಪಬ್ಲಿಕ್ ಐ ವರದಿ ನೆಸ್ಲೆ ಕಂಪನಿಯು ಬಡ ದೇಶಗಳಲ್ಲಿ ಮಕ್ಕಳ ಉತ್ಪನ್ನಗಳಿಗೆ ಹೆಚ್ಚು ಸಕ್ಕರೆಯನ್ನು ಸೇರಿಸುತ್ತದೆ ಎಂಬುದನ್ನು ಬಯಲಿಗೆಳೆದಿದೆ. ಅಷ್ಟೇ ಅಲ್ಲ ಕಂಪನಿಯು ತನ್ನ ಉತ್ಪನ್ನಗಳ ಬಗ್ಗೆ  ಮಾಹಿತಿಯನ್ನೂ ನೀಡುವುದಿಲ್ಲ. ಜೀವಸತ್ವಗಳು ಮತ್ತು ಖನಿಜಗಳ ವಿವರಗಳು ಲಭ್ಯವಿವೆ, ಆದರೆ ಉತ್ಪನ್ನದಲ್ಲಿ ಇರುವ ಸಕ್ಕರೆಯ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಿಲ್ಲ. ಭಾರತದಲ್ಲಿ ನೆಸ್ಲೆಯ ಸೆರೆಲಾಕ್‌ನ ಪ್ರತಿ ಚಮಚದಲ್ಲಿ 3 ರಿಂದ 4 ಗ್ರಾಂ ಸಕ್ಕರೆ ಇರುತ್ತದೆ. ಆದರೆ ಸ್ವಿಡ್ಜರ್ಲೆಂಡ್, ಬ್ರಿಟನ್, ಯುರೋಪ್ ದೇಶಗಳಲ್ಲಿ ಈ ಪ್ರಮಾಣ ಶೂನ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳ ಪ್ರಕಾರ 3 ವರ್ಷದೊಳಗಿನ ಮಕ್ಕಳ ಆಹಾರದಲ್ಲಿ ಸಕ್ಕರೆ ಬೆರೆಸಿದರೆ ಅದು ಬೊಜ್ಜು, ಮಾನಸಿಕ ಆರೋಗ್ಯ, ಬಿಳಿ ರಕ್ತ ಕಣಗಳ ದುರ್ಬಲತೆ, ದುರ್ಬಲ ರೋಗನಿರೋಧಕ ಶಕ್ತಿ, ಹಲ್ಲಿನ ಕುಳಿಗಳಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ನೆಸ್ಲೆಗೆ ಭಾರತ ಸಣ್ಣ ಮಾರುಕಟ್ಟೆಯೇನಲ್ಲ. 2022 ರಲ್ಲಿ ನೆಸ್ಲೆ ಭಾರತದಲ್ಲಿ 20,000 ಕೋಟಿಗಿಂತಲೂ ಹೆಚ್ಚು ಮೌಲ್ಯದ ಸೆರೆಲಾಕ್ ಅನ್ನು ಮಾರಾಟ ಮಾಡಿದೆ. ನೆಸ್ಲೆಯ ಒಟ್ಟಾರೆ  ವಹಿವಾಟಿನಲ್ಲಿ ಭಾರತ ಮತ್ತು ಬ್ರೆಜಿಲ್ ಶೇ.40 ಕ್ಕಿಂತಲೂ ಹೆಚ್ಚು ಪಾಲನ್ನು ಹೊಂದಿದ್ದವು. ಭಾರತದಲ್ಲಿ ಸೆರೆಲಾಕ್ ಅನ್ನು ಮಕ್ಕಳಿಗೆ ಸಂಪೂರ್ಣ ಆಹಾರವಾಗಿ ಮಾರಾಟ ಮಾಡಲಾಗುತ್ತದೆ.

ನೆಸ್ಲೆಯ ಈ ನಿರ್ಲಕ್ಷ್ಯದ ಬಗ್ಗೆ ಸರ್ಕಾರ ವೈಜ್ಞಾನಿಕ ಸಮಿತಿಯಿಂದ ತನಿಖೆ ನಡೆಸಲಿದೆ. ನೆಸ್ಲೆ ಮಾತ್ರವಲ್ಲ, ಬೌರ್ನ್ವಿಟಾ ಕೂಡ ಭಾರತದಲ್ಲಿ ಇದೇ ರೀತಿಯ ವಂಚನೆ ನಡೆಸಿದೆ. ಭಾರತದಲ್ಲಿ ಜನರು ಬೌರ್ನ್ವಿಟಾವನ್ನು ‘ಆರೋಗ್ಯಕರ ಪಾನೀಯ’ ಎಂದು ಪರಿಗಣಿಸಿ ಕುಡಿಯುತ್ತಿದ್ದಾರೆ. ಬೌರ್ನ್ವಿಟಾದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಾಗಾಗಿ ಅದನ್ನು ಆರೋಗ್ಯಕರ ಪಾನೀಯ ವರ್ಗದಿಂದ ಹೊರಗಿಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...