ಮಡಿಕೇರಿ: ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಗಡಿಭಾಗದ ಅಂಗಡಿಯೊಂದರ ಬಳಿ 8 ನಕ್ಸಲರು ಕಾಣಿಸಿಕೊಂಡಿದ್ದು, ಕಾಡಂಚಿನ ಅಂಗಡಿಗೆ ತೆರಳಿದ ನಕ್ಷಲರ ತಂಡ ದಿನಸಿ ಖರೀದಿಸಿದೆ. ಮಾಹಿತಿ ಪಡೆದ ದಕ್ಷಿಣ ಕನ್ನಡ, ಕೊಡಗು ಜಿಲ್ಲಾ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಎಂಟು ಮಂದಿ ನಕ್ಸಲರ ತಂಡ ಮಡಿಕೇರಿ ತಾಲೂಕು ಕಡಮಕಲ್ಲು ಸಮೀಪದ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡಿದೆ. ಶನಿವಾರ ಸಂಜೆ ಕಾಣಿಸಿಕೊಂಡ ನಕ್ಸಲರು ಕೂಜಿಮಲೆ ಕಲ್ಮುಖರು ಅಂಗಡಿಯೊಂದರಲ್ಲಿ ದಿನಸಿ ಖರೀದಿಸಿದ್ದಾರೆ. ಇವರು ನಕ್ಸಲರಿರಬಹುದು ಎನ್ನುವ ಸಂಶಯದ ಮೇಲೆ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
2012 ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. 2018ರ ಫೆಬ್ರವರಿಯಲ್ಲಿ ಸಂಪಾಜೆಗುಡ್ಡೆ ಗದ್ದೆಯಲ್ಲಿ ಪ್ರತ್ಯಕ್ಷರಾಗಿದ್ದರು. ಈಗ ಲೋಕಸಭೆ ಚುನಾವಣೆ ಹೊತ್ತಲ್ಲಿ ನಕ್ಸಲರ ಓಡಾಟ ಕಂಡು ಬಂದಿದೆ ಎನ್ನಲಾಗಿದೆ.