ಬೆಂಗಳೂರು: ಪರ್ಸ್ ಹುಡುಕಲು ವಿಮಾನ ಸಿಬ್ಬಂದಿ ಸಹಕರಿಸಿಲ್ಲ ಎಂದು ಬಾಂಬ್ ಬೆದರಿಕೆ ಕರೆ ಮಾಡಿ ಪ್ರಯಾಣಿಕನೊಬ್ಬ ಜೈಲುಪಾಲಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಬಾಂಬ್ ಬೆದರಿಕೆ ಕರೆ ಮಾಡಿದ್ದ ಶ್ರೇಯಸ್ ಚಾರ್ಮಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 26ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶ್ರೇಯಸ್ ಚಾರ್ಮಿಯಾ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ನಲ್ಲಿ ಆಗಮಿಸಿದ್ದ. ಈ ವೇಳೆ ಪರ್ಸ್ ಕಳೆದುಕೊಂಡಿದ್ದು, ಪರ್ಸ್ ಹುಡುಕಿಕೊಡಲು ಸಹಾಯ ಮಾಡಿಲ್ಲ ಎಂದು ವಿಮಾನದ ಕಾಲ್ ಸೆಂಟರ್ ಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದಾನೆ.
ಕೆಂಪೇಗೌಡ ಏರ್ ಪೋರ್ಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಶ್ರೇಯಸ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.