ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕೂಡ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯ ಮಸೀದಿಯೊಂದರ ಬಳಿ ಈ ಸ್ಫೋಟ ಸಂಭವಿಸಿದ್ದು, ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಂದು ಜನರು ಜಮಾಯಿಸುತ್ತಿದ್ದರು. ಈ ವೇಳೆ ಸ್ಪೋಟ ಸಂಭವಿಸಿದೆ.ಮೃತರಲ್ಲಿ ಮಸ್ತುಂಗ್ನ ಡಿಎಸ್ಪಿ ನವಾಜ್ ಗಶ್ಕೋರಿ ಕೂಡ ಸೇರಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಇದು ಸೆಪ್ಟೆಂಬರ್ನಲ್ಲಿ ಇದೇ ಜಿಲ್ಲೆಯಲ್ಲಿ ನಡೆದ ಎರಡನೇ ದೊಡ್ಡ ಸ್ಫೋಟವಾಗಿದೆ. ಈ ತಿಂಗಳ ಆರಂಭದಲ್ಲಿ ನಡೆದ ಸ್ಫೋಟದಲ್ಲಿ ಜಮಿಯತ್ ಉಲೇಮಾ-ಇ-ಇಸ್ಲಾಂ ಫಜಲ್ (ಜೆಯುಐ-ಎಫ್) ನಾಯಕ ಹಫೀಜ್ ಹಮ್ದುಲ್ಲಾ ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದರು.