ಬೆಂಗಳೂರು: ಸಚಿವ ಸ್ಥಾನ ವಂಚಿತ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ನಿಗಮ -ಮಂಡಳಿಗಳಿಗೆ ನೇಮಕ ಮಾಡಲು ತೀರ್ಮಾನಿಸಲಾಗಿದೆ.
ನಿಗಮ -ಮಂಡಳಿ ನೇಮಕಾತಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಅಥವಾ ಎರಡೂವರೆ ವರ್ಷದ ನಂತರ ಸಚಿವ ಸ್ಥಾನ ಬೇಕೆ ಎಂಬ ಆಯ್ಕೆಯನ್ನು ಶಾಸಕರ ಮುಂದಿಡುವಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎನ್ನಲಾಗಿದೆ.
ಎರಡೂವರೆ ವರ್ಷದ ನಂತರ ಸಚಿವ ಸಂಪುಟ ಪುನಾರಚನೆ ಆಗಲಿದ್ದು, ಆಗ ಸಚಿವರಾಗುವವರು ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯುವಂತಲ್ಲ. ಸಚಿವ ಸ್ಥಾನ ಬೇಡವೆಂದಾದಲ್ಲಿ ನಿಗಮದ ಅಧಿಕಾರ ನೀಡಲಾಗುವುದು ಎನ್ನಲಾಗಿದೆ.
ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಲು 20ಕ್ಕೂ ಅಧಿಕ ಶಾಸಕರ ಪಟ್ಟಿಯನ್ನು ರಾಜ್ಯ ನಾಯಕರು ಸಿದ್ಧಪಡಿಸಿದ್ದಾರೆ. ಅದರಲ್ಲಿ ರಾಘವೇಂದ್ರ ಹಿಟ್ನಾಳ್, ಕೆ.ಎಂ. ಶಿವಲಿಂಗೇಗೌಡ, ಟಿ.ಡಿ. ರಾಜೇಗೌಡ, ಅನಿಲ್ ಚಿಕ್ಕಮಾದು, ಬಿ.ಜಿ. ಗೋವಿಂದಪ್ಪ, ಹೆಚ್.ಸಿ. ಬಾಲಕೃಷ್ಣ, ಬಿ.ಕೆ. ಸಂಗಮೇಶ್ವರ, ರೂಪಾ ಶಶಿಧರ್, ಎನ್.ಹೆಚ್. ಕೋನರೆಡ್ಡಿ, ಬಿ. ಪುಟ್ಟರಂಗಶೆಟ್ಟಿ, ಪಿ.ಎನ್. ನರೇಂದ್ರಸ್ವಾಮಿ, ಟಿ. ರಘುಮೂರ್ತಿ ಸೇರಿದಂತೆ ಹಲವರ ಹೆಸರುಗಳು ಇವೆ ಎಂದು ಹೇಳಲಾಗಿದೆ.