ಬೆಂಗಳೂರು: ಬಿಎಂಟಿಸಿ ಬಸ್ ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಚಾಲಕರಿಗೆ ಮಾರ್ಗ ಕ್ರಮಿಸಲು ನಿಗದಿ ಮಾಡಿದ್ದ ಅವಧಿ ಬದಲಾವಣೆಗೆ ನಿರ್ಧರಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ವಾಹನ ಸಂಖ್ಯೆ ಅತಿ ಹೆಚ್ಚಾಗಿ ಸಂಚಾರದಟ್ಟಣೆ ಕೂಡ ಹೆಚ್ಚಾಗಿದೆ. ಹೀಗಾಗಿ ಬಿಎಂಟಿಸಿ ಬಸ್ ಗಳು ನಿಗದಿತ ಸಮಯದಲ್ಲಿ ನಿಗದಿತ ಮಾರ್ಗ ಕ್ರಮಿಸಲು ಸಾಧ್ಯವಾಗುತ್ತಿಲ್ಲ.
ಸಂಚಾರದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾರ್ಗಗಳ ಕ್ರಮಿಸುವ ಅವಧಿ ಪರಿಶೀಲಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈಗ ಬಿಎಂಟಿಸಿ ಬಸ್ ಗಳಿಗೆ ನಿಗದಿ ಮಾಡಿದ್ದ ಮಾರ್ಗ ಕ್ರಮಿಸುವ ಸಮಯವನ್ನು ಹಂತ ಹಂತವಾಗಿ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ.
5530 ಶೆಡ್ಯೂಲ್ ಗಳ ಮೂಲಕ 55,000 ಟ್ರಿಪ್ ಗಳನ್ನು ಬಿಎಂಟಿಸಿ ನಿರ್ವಹಿಸುತ್ತಿದ್ದು, ಪ್ರತಿದಿನ 11 ಲಕ್ಷ ಕಿಮೀ ಕ್ರಮಿಸಿ 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಬಸ್ ಗಳು ಎಷ್ಟು ಸಮಯದಲ್ಲಿ ಯಾವ ನಿಲುಗಡೆಯಿಂದ ಯಾವ ನಿಲುಗಡೆಗೆ ತಲುಪಬೇಕೆಂದು ಸಮಯ ನಿಗದಿಪಡಿಸಲಾಗಿದ್ದು, ಇದರಿಂದ ಚಾಲಕರು ಒತ್ತಡಕ್ಕೆ ಒಳಗಾಗುತ್ತಿದ್ದರು. ಬದಲಾವಣೆ ಮಾಡಲು ಈ ಮೂಲಕ ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡಲು ನಿರ್ಧರಿಸಲಾಗಿದೆ.