
ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ರಾಜ್ಯದಲ್ಲಿನ ಬರ ಅಧ್ಯಯನ ಮಾಡಿ ಆಗಿದೆ. ಕೇಂದ್ರ ಸರ್ಕಾರದ ತಂಡವೂ ಬರ ಅಧ್ಯಯನ ಮಾಡಿ ಹೋಗಿದೆ. ಈಗ ಬಿಜೆಪಿ- ಜೆಡಿಎಸ್ ನವರಿಗೆ ಜನರ ಮೇಲೆ ಬಹಳ ಅನುಕಂಪ ಬಂದು ಬರ ಅಧ್ಯಯನಕ್ಕೆ ಹೊರಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕರ್ನಾಟಕ ಸರ್ಕಾರ ಬರ ಅಧ್ಯಯನ ನಡೆಸಿ ವರದಿ ಕೊಟ್ಟಿದೆ. ಕೇಂದ್ರ ವರದಿ ಸ್ವೀಕರಿಸಿ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ. ಬಿಜೆಪಿ-ಜೆಡಿಎಸ್ ಶಾಸಕರು ಅನುದಾನವನ್ನು ಕೊಡಿಸುವ ಕೆಲಸ ಮಾಡಲಿ. ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಪರಿಹಾರ ಕೊಡಿಸಲಿ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಎರಡು ಗಿಡಗಳನ್ನು ನೋಡುವುದಲ್ಲ ಎಂದು ಟಾಂಗ್ ನೀಡಿದರು.
ಕೇಂದ್ರ ಸರ್ಕಾರದ ಬಳಿ ನಾವೇನು ಭಿಕ್ಷೆ ಕೇಳುತ್ತಿಲ್ಲ. ಕರ್ನಾಟಕಕ್ಕೆ ಕೇಂದ್ರ ಕೊಡಬೇಕಾದ ಅನುದಾನ ಕೊಡಲಿ ಅಷ್ಟೇ ಎಂದು ಹೇಳಿದರು.