ಮಧ್ಯಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದೆ. ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಶಾಸಕ ಕೇದಾರನಾಥ ಶುಕ್ಲಾ ತಮ್ಮ ಬೆಂಬಲಿಗನ ಉದ್ಧಟತನಕ್ಕೆ ತಲೆದಂಡ ತೆರುವಂತೆ ಆಗಿದೆ.
ಹಾಲಿ ಬಿಜೆಪಿ ಶಾಸಕ ಶುಕ್ಲಾರಿಗೆ ಈ ಬಾರಿ ವಿಧಾನಸಭಾ ಟಿಕೆಟ್ ಮಿಸ್ ಆಗಿದ್ದು ಸಿಧಿ ಕ್ಷೇತ್ರದ ಟಿಕೆಟ್ನ್ನು ಹಾಲಿ ಸಂಸದ ರಿತಿ ಪಾಠಕ್ರಿಗೆ ನೀಡಲಾಗಿದೆ.
ಒಂದೆರಡು ತಿಂಗಳ ಹಿಂದೆ ಸಿಧಿಯಲ್ಲಿ ನಡೆದಿದ್ದ ಅಮಾನವೀಯ ಘಟನೆಗೆ ಶುಕ್ಲಾ ಬೆಲೆ ತೆತ್ತಿರಬಹುದು ಎಂಬ ಅನುಮಾನ ಮೂಡಿದೆ. ಶುಕ್ಲಾ ಬೆಂಬಲಿಗರ ಪೈಕಿ ಒಬ್ಬರಾದ ದಶ್ಮತ್ ರಾವತ್ ಎಂಬಾತ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು ಅಲ್ಲದೇ ಬಿಜೆಪಿ ಮುಖಂಡ ದಶ್ಮತ್ ರಾವತ್ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.
ಶುಕ್ಲಾರ ಆಪ್ತ ವಲಯದಲ್ಲಿ ದಶ್ಮತ್ ರಾವತ್ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದರೆ ಕಾಂಗ್ರೆಸ್ ಆದಿವಾಸಿಗಳ ಮೇಲೆ ಬಿಜೆಪಿ ದೌರ್ಜನ್ಯ ನಡೆಸುತ್ತದೆ ಅನ್ನೋದನ್ನೇ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.