ನವದೆಹಲಿ: ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆಪ್ತ ಸಹಾಯಕ ಸುಭಾಷ್ ಯಾದವ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ತಡರಾತ್ರಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶನಿವಾರ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸುಭಾಷ್ ಯಾದವ್ ಅವರ ಮನೆ ಮತ್ತು ಇತರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಬಂಧಿಸಲಾಯಿತು. ಸುಭಾಷ್ ಯಾದವ್ ಅವರ ಎಂಟು ಸ್ಥಳಗಳ ಮೇಲೆ ಇಡಿ 14 ಗಂಟೆಗಳ ಕಾಲ ದಾಳಿ ನಡೆಸಿತ್ತು. ಫೆಡರಲ್ ಏಜೆನ್ಸಿ ತಂಡವು ಅವರ ದಾನಪುರ ನಿವಾಸದಿಂದ ಸುಮಾರು 2.3 ಕೋಟಿ ರೂಪಾಯಿ ನಗದು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಅಕ್ರಮ ಮರಳು ದಂಧೆ
ಸುಭಾಷ್ ಯಾದವ್ ಅವರು ಆರ್‌ಜೆಡಿ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದಾರೆ. ಬ್ರಾಡ್ ಸನ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರೂ ಆಗಿರುವ ಸುಭಾಷ್ ಯಾದವ್ ಅವರು ಬಿಹಾರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣವು ಈ ಹಿಂದೆ ಬಿಹಾರ ಪೊಲೀಸರು ದಾಖಲಿಸಿದ ಕೆಲವು ಎಫ್‌ಐಆರ್‌ಗಳ ಮುಂದುವರೆದ ಭಾಗವಾಗಿದೆ.