ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಸಮೀಪ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ನಗರ ಹೊರ ವಲಯದಲ್ಲಿ ಘಟನೆ ನಡೆದಿದ್ದು, ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ 5ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗೇಪಲ್ಲಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋ ಬೆಂಗಳೂರು –ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಾಹನ ನಜ್ಜುಗುಜ್ಜಾಗಿದ್ದು, ಅದರಿಂದ ಮೃತದೇಹಗಳನ್ನು ಹೊರತೆಗೆಯಲು, ಗಾಯಾಳುಗಳನ್ನು ರಕ್ಷಿಸಲು ಹರಸಾಹಸ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.