ಚಿತ್ರದುರ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದಲ್ಲಿ ಬಹುದೊಡ್ಡ ಸಾಮಾಜಿಕ ಬದಲಾವಣೆ ಮೂಡಲಿದೆ. ಬಡ ಜನರ ಕೊಳ್ಳುವ ಶಕ್ತಿ ಹೆಚ್ಚಲಿದೆ. ಇದು ಅಭಿವೃದ್ಧಿಗೆ ಪೂರಕವಾಗಲಿದೆ. ಜನರೋದ್ಧಾರವೇ ದೇಶದ ನಿಜವಾದ ಉದ್ಧಾರವಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಅವರು, ಗೌರವ ರಕ್ಷೆ ಸ್ವೀಕರಿಸಿ ನಂತರ ತಮ್ಮ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಸರ್ವರಿಗೂ ಸಮಾನ ಅವಕಾಶಗಳು ದೊರೆತರೆ ದೇಶದ ಪ್ರಗತಿ ಸಾಧ್ಯ. ಸರ್ಕಾರದ ಐದು ಯೋಜನೆಗಳ ಜಾರಿ ಪವಾಡವೇನೂ ಅಲ್ಲ. ರಾಜ್ಯದ ಸಂಪತ್ತನ್ನು ಹಂಚಿ, ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಪ್ರಯತ್ನವಾಗಿದೆ. ನಿಜವಾದ ಸರ್ಕಾರ ಜನಕಲ್ಯಾಣದ ಬಗ್ಗೆ ಚಿಂತಿಸುತ್ತದೆ. ಸರ್ಕಾರದ ಈ ಗ್ಯಾರಂಟಿ ಯೋಜನೆಗಳನ್ನು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ದೃಷ್ಟಿಕೋನದ ಮೂಲಕ ಚಿಂತಿಸುವುದು ಸೂಕ್ತ ಎನಿಸುತ್ತದೆ ಎಂದರು.
5 ಜನಕಲ್ಯಾಣ ಯೋಜನೆಗಳಲ್ಲಿ ಈಗಾಗಲೇ 4 ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಗೆ ತಲುಪಿ ಸಾಕಾರಗೊಂಡಿರುತ್ತವೆ. ಜಿಲ್ಲೆಯಲ್ಲಿಯೂ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ಮಹಿಳೆಯರು ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವ “ಶಕ್ತಿ ಯೋಜನೆ”ಯಿಂದ ಮಹಿಳಾ ಸಬಲೀಕರಣದತ್ತ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.
ಸಾಮಾಜಿಕ, ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ ಪೆÇ್ರೀತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಯೋಜನೆಯಡಿ ಜಿಲ್ಲೆಯಿಂದ 30,15,041 (ಸುಮಾರು 30 ಲಕ್ಷಕ್ಕೂ ಅಧಿಕ) ಮಹಿಳೆಯರು ಯೋಜನೆಯ ಸದುಪಯೋಗ ಪಡಿಸಿಕೊಂಡು, ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಈ ಮೂಲಕ ನಿಗಮಕ್ಕೆ 11. 44 ಲಕ್ಷ ರೂ. ಗಳ ಮೊತ್ತದ ಪ್ರಯಾಣ ಕೈಗೊಂಡು, ಮಹಿಳಾ ಮಣಿಗಳು ನಿಗಮಕ್ಕೆ ಸರಾಸರಿ ಪ್ರತಿ ದಿನಕ್ಕೆ ರೂ.10.00 ಲಕ್ಷಗಳ ಆದಾಯವನ್ನು ಕೊಟ್ಟಿರುತ್ತಾರೆ ಎಂದರು.
“ಗೃಹ ಲಕ್ಷ್ಮೀ” ಯೋಜನೆಯಡಿ ಜಿಲ್ಲೆಯಲ್ಲಿ ಶೇ.86ಕ್ಕೂ ಅಧಿಕ ಮಹಿಳೆಯರು ನೊಂದಣಿ ಮಾಡಿಕೊಂಡಿದ್ದಾರೆ. ಇದರ ಸಂಖ್ಯೆ 3,47,624 ಆಗಿದೆ. ಆಗಸ್ಟ್ 27ರಂದು ಫಲಾನುಭವಿಗಳಿಗೆ ಯೋಜನೆಯ ಮೊತ್ತ ತಲಾ ರೂ.2,000/-ಅನ್ನು ಕುಟುಂಬದ ಮಹಿಳಾ ಮುಖ್ಯಸ್ಥೆಗೆ ವರ್ಗಾಯಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿರುತ್ತದೆ.
“ಅನ್ನ ಭಾಗ್ಯ” ಯೋಜನೆಯಡಿ ಪ್ರತಿ ಬಿ.ಪಿ.ಎಲ್. ಕುಟುಂಬದ ಫಲಾನುಭವಿಗೆ ತಲಾ 5 ಕೆ.ಜಿಯಂತೆ ಆಹಾರ ಧಾನ್ಯವನ್ನು, ಉಳಿದ 5 ಕೆ.ಜಿಗೆ ರೂ.170/- ನೀಡಲಾಗಿದೆ. ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 3,19,813 ಫಲಾನುಭವಿಗಳಿಗೆ ಆಹಾರ ಧಾನ್ಯದೊಂದಿಗೆ ಅವರ ಖಾತೆಗೆ ಸುಮಾರು ರೂ.18.43 ಕೋಟಿಗಳನ್ನು ಸರ್ಕಾರದಿಂದ ಸಂದಾಯ ಮಾಡಲಾಗಿದೆ.
“ಗೃಹಜ್ಯೋತಿ” ಯೋಜನೆಯು ಈಗಾಗಲೇ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತಲುಪಿದ್ದು, ಈ ತಿಂಗಳಿನಿಂದಲೇ ಝೀರೋ ವಿದ್ಯುತ್ ಬಿಲ್ಲನ್ನು ಸಹ ಎಲ್ಲಾ ಫಲಾನುಭವಿಗಳಿಗೆ ನೀಡಲಾಗಿರುತ್ತದೆ. ಒಟ್ಟಾರೆಯಾಗಿ ನಾಲ್ಕು ಭಾಗ್ಯಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ ಲೋಕ ಕಲ್ಯಾಣದ ರೂಪದಲ್ಲಿ ಜನತೆಗೆ ಪ್ರಾಪ್ತವಾಗಿರುವುದು. ಒಂದು ರೀತಿಯಲ್ಲಿ ಹೊಂಗಿರಣಗಳು ಮೂಡಿದಂತಾಗಿದೆ.
“ಯುವನಿಧಿ” ಯೋಜನೆಯನ್ನು ಸಹ ರಾಜ್ಯ ಸರ್ಕಾರವು ಜನತೆಗೆ ಮುಂಬರುವ ದಿನಗಳಲ್ಲಿ ಜಾರಿಗೊಳಿಸಲಾಗುವುದು ಎಂದರು.