ಬೆಂಗಳೂರು : ಬೆಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪದ ಪ್ರಕರಣದ ಪ್ರಮುಖ ಆರೋಪಿ ಟಿ. ನಜೀರ್ ನನ್ನು ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಅಗ್ರಹಾರ ಜೈಲಿನಲ್ಲಿರುವ ಟಿ.ನಜೀರ್ ನನ್ನು ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಸಲ್ಲಿಸಿದ್ದು, ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ನಜೀರ್ ಕೇರಳದ ಎಲ್ ಇಟಿ ಅಬ್ದುಲ್ ಮದನಿಯ ಆತ್ಮೀಯನಾಗಿದ್ದು, ಕೊಯಮತ್ತೂರಿನಲ್ಲಿ ಬಾಂಬ್ ಸ್ಪೋಟ, 2008 ರಲ್ಲಿ ಬೆಂಗಳೂರಿನ ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿಯಾಗಿದ್ದ. ಬಾಂಬ್ ಸ್ಪೋಟದ ಬಳಿಕ ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಜೈಲಿನಲ್ಲೇ ಇದ್ದುಕೊಂಡೇ ಯುವಕರನ್ನು ಉಗ್ರವಾದದ ಕಡೆಗೆ ಸೆಳೆಯುವುದು ಈತನ ಕೆಲಸವಾಗಿತ್ತು.ಬೆಂಗಳೂರಿನಲ್ಲಿ ಕೊಲೆ ಮತ್ತು ಕಿಡ್ನಾಪ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಐವರು ಯುವಕರಿಗೆ ಉಗ್ರವಾದದ ಬಗ್ಗೆ ತಲೆಗೆ ತುಂಬಿದ್ದ ಎಂದು ಹೇಳಲಾಗುತ್ತಿದೆ.