ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಮೂರು ತಂಡಗಳು ರಾಜ್ಯಕ್ಕೆ ಅಗಮಿಸುತ್ತಿದ್ದು, ಅಕ್ಟೋಬರ್ 5 ರ ಇಂದಿನಿಂದ ನಾಲ್ಕು ದಿನಗಳ ಕಾಲ ವಿವಿಧ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿವೆ.
ಕೇಂದ್ರ ತಂಡವು ಹತ್ತು ಜನ ಸದಸ್ಯರನ್ನೊಳಗೊಂಡಿದ್ದು, ರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಎಲ್ಲಾ ಸದಸ್ಯರು ಬೆಂಗಳೂರಿಗೆ ಅಗಮಿಸಿದ್ದು, ವಾಸ್ತವ್ಯ ಮಾಡಲಿದ್ದಾರೆ. ಇಂದು ಮೂರೂ ತಂಡಗಳಾಗಿ ಬೆಳಿಗ್ಗೆ 9:30 ರಿಂದ 10:30ರ ಗಂಟೆಯವರೆಗೆ ಕರ್ನಾಟಕ ರಾಜ್ಯ ಪೃಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿವೆ. ಮಧ್ಯಾಹ್ನ 12:00 ಗಂಟೆಗೆ ವಿಧಾನ ಸೌಧ ಕೊಠಡಿಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಸಂಕ್ಷಿಪ್ತ ವಿವರ ಪಡೆದು ಜಿಲ್ಲೆಗಳಿಗೆ ತೆರಳಲಿದ್ದಾರೆ.
ತಂಡ ಪ್ರವಾಸದ ವಿವರ
ಅಕ್ಟೋಬರ್ 5 ರಂದು ಸಂಜೆ ಬೆಳಗಾವಿಗೆ ಆಗಮಿಸುವ ಅಧ್ಯಯನ ತಂಡವು ಅಕ್ಟೋಬರ್ 6 ರಂದು ಬೆಳಗಾವಿ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ಬರ ಪರಿಶೀಲನೆ, ಅಕ್ಟೋಬರ್ 7 ರಂದು ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಬರ ಪರಿಶೀಲನೆ ಮಾಡಲಿದ್ದಾರೆ. ಅಕ್ಟೋಬರ್ 8 ರಂದು ಬೆಂಗಳೂರು ಮರು ಪ್ರಯಾಣ ಬೆಳಸಲಿದ್ದಾರೆ. ತಂಡದ ಸದಸ್ಯರು ಅಕ್ಟೋಬರ್ 8 ರಂದು ಬೆಂಗಳೂರಿಗೆ ಆಗಮಿಸಿ, ಅಕ್ಟೋಬರ್ 9 ರಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ಸ್ಥಳೀಯ ಅಧಿಕಾರಿಗಳಿಂದ ಸಂಕ್ಷಿಪ್ತ ವಿವರಣೆ ಪಡೆದು ದೆಹಲಿಗೆ ತೆರಳಲಿದ್ದಾರೆ.
ಅಧಿಕಾರಿಗಳಿಗೆ ಕೃಷಿ ಸಚಿವರ ಸೂಚನೆ:
ಕೇಂದ್ರ ತಂಡ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂದಾಯ,ಕೃಷಿ ,ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಾಲಿನ ಮಳೆಯ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ಹಲವುಕಡೆ ಸಂಪೂರ್ಣ ಬೆಳೆ ಹಾನಿಯಾಗಿದ್ದು ಕೆಲವೆಡೆ ಬೆಳೆ ಇದ್ದರೂ ಉಂಟಾಗಲಿರುವ ತೀವ್ರ ಇಳುವರಿ ಕುಸಿತದ ಬಗ್ಗೆ ಪರಿಣಾಮಕಾರಿಯಾಗಿ ವಿವರಿಸಿ ಅರ್ಥ ಮಾಡಿಕೊಡಬೇಕು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.