ಬೆಂಗಳೂರು : ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ನಗರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು ನಗರದ ಜನತೆ ಹೊಸ ವರ್ಷಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಆದ್ಯತೆಯನ್ನಾಗಿ ಪರಿಗಣಿಸಿ, ನಗರದಾದ್ಯಂತ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಿಕೊಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
22-12-2023 ರಂದು ವಿಧಾನಸೌಧದಲ್ಲಿ 2024ನೇ ಸಾಲಿನ ನೂತನ ವರ್ಷಾಚರಣೆಯ ಸಂಬಂಧ ಮಾನ್ಯ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಒಳಾಡಳಿತ ಇಲಾಖೆ, ಬೆಂಗಳೂರು ನಗರ ಪೊಲೀಸ್, ಬಿ.ಬಿ.ಎಂ.ಪಿ.. ಆರೋಗ್ಯ ಇಲಾಖೆ. ಅಬಕಾರಿ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಗ್ನಿಶಾಮಕ ಇಲಾಖೆ, ಬೆಸ್ ಕಾಂ. ಬಿ.ಎಂ.ಆರ್.ಸಿ.ಎಲ್ ಹಾಗೂ ಇತರೆ ಇಲಾಖೆಗಳು/ಸಂಸ್ಥೆಗಳೊಂದಿಗೆ ಸಭೆಯನ್ನು ಏರ್ಪಡಿಸಿದ್ದು. ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸೂಚಿಸಲಾಗಿರುತ್ತದೆ.
1) ನಗರದಲ್ಲಿ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವ ಪ್ರಮುಖ ಸ್ಥಳಗಳಾದ ಎಂ.ಜಿ ರಸ್ತೆ-ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ಪಾರ್ಕ್, ಟ್ರಿನಿಟಿ ಸರ್ಕಲ್, ಫೀನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್ಗಳು, ಪಬ್ಗಳು, ಕ್ಲಬ್ಗಳು ಮುಂತಾದ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ಬಂದೋಬಸ್ತ್ ಪಿಕೇಟಿಂಗ್ ಪಾಯಿಂಟ್ ಗಳನ್ನು ನೇಮಕ ಮಾಡಲಾಗುವುದು.
2) ವಿಶೇಷವಾಗಿ ಕೇಂದ್ರ ವಿಭಾಗದ ಬ್ರಿಗೇಡ್ ರಸ್ತೆ-ಎಂ.ಜಿ.ರಸ್ತೆ, ಒಪೆರಾ ಜಂಕ್ಷನ್, ರಿಚ್ಯಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ 04 ಡಿಸಿಪಿ, 10 ಎಸಿಪಿ, 30 ಜನ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 3000 ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
3) ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿರುವ ಮಹಿಳಾ ಸುರಕ್ಷತಾ ಸ್ಥಳಗಳನ್ನು (Women Safety Island) ತೆರೆಯಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
4) ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಕಿಯೋಸ್ಟ್ಗಳನ್ನು (Police Kiosk) ತೆರೆದಿದ್ದು, ಮಕ್ಕಳು ಕಾಣೆಯಾದಲ್ಲಿ, ಯಾವುದೇ ರೀತಿಯ ಕಳುವಿನ ದೂರುಗಳಿಗೆ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ಅವಶ್ಯಕ ಸೇವೆಯನ್ನು ಪಡೆಯಬಹುದಾಗಿದೆ.
5) ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಣಾವಲು ಏರ್ಪಡಿಸಲು ಸಿಬ್ಬಂದಿಗಳಿಗೆ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದು, ವೀಕ್ಷಣಾ ಗೋಪುರಗಳಲ್ಲಿ ಕರ್ತವ್ಯಕ್ಕೆ ನೇಮಕ ಮಾಡಲಾಗುವ ಸಿಬ್ಬಂದಿಗಳಿಗೆ ಬೈನಾಕುಲರ್ ಉಪಕರಣಗಳನ್ನು ಒದಗಿಸಲಾಗುವುದು.
6) ದಿನಾಂಕ: 31-12-2023 ರಂದು ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಭಂದಿಸಿ. ಸಾರ್ವಜನಿಕರಿಗೆ ನಡಿಗೆಯ ಮೂಲಕ ಏಕ ಮುಖ ಪ್ರವೇಶಕ್ಕೆ ಮಾತ್ರ ಅವಕಾಶ ಮಾಡಿದ್ದು. ಎಂ.ಜಿ ರಸ್ತೆಗೆ ಪ್ರವೇಶಿಸುವವರಿಗೆ ಅನಿಲ್ ಕುಂಬ್ಲೆ ಸರ್ಕಲ್ ನಿಂದ ಹಾಗೂ ಮೇಯೋ ಹಾಲ್ ಜಂಕ್ಷನ್ ಮೂಲಕ ಎಂ.ಜಿ.ರಸ್ತೆ ಪ್ರವೇಶಿಸಬಹುದಾಗಿದ್ದು ನಂತರ ಬ್ರಿಗೇಡ್ ರಸ್ತೆ ಜಂಕ್ಷನ್ ಮೂಲಕ ಬ್ರಿಗೇಡ್ರಸ್ತೆಗೆ ಪ್ರವೇಶಿಸಿ ಏಕಮುಖವಾಗಿ ಚಲಿಸಿ ಒಪೇರಾ ಜಂಕ್ಷನ್ನಲ್ಲಿ ಹೊರ ಹೋಗಲು ಅವಕಾಶ ಮಾಡಲಾಗಿದೆ.
7) ಸಾರ್ವಜನಿಕರು ಸದರಿ ಸ್ಥಳಗಳಲ್ಲಿ ಅಳವಡಿಸಲಾಗಿರುವ ಡಿ.ಎಫ್.ಎಂ.ಡಿ ಮೂಲಕ
ಪ್ರವೇಶಿಸುವುದು ಹಾಗೂ ಪೊಲೀಸ್ ತಪಾಸಣೆಗೆ ಸಹಕರಿಸಲು ಕೋರಿದೆ.ಈ ಹಿಂದೆ ವರ್ಷಾಚರಣೆಯನ್ನು ಮುಗಿಸಿಕೊಂಡು ಸಾರ್ವಜನಿಕರು ವಾಪಸ್ ಹೋಗುವ ಸಂದರ್ಭದಲ್ಲಿ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿಯಾಗಿ ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾದ್ದರಿಂದ ಈ ವರ್ಷ ರಾತ್ರಿ 11-00 ಗಂಟೆಯಿಂದ 02-00 ಗಂಟೆಯವರೆಗೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದ ಮೂಲಕ ಪ್ರಯಾಣಿಕರು ನಿರ್ಗಮಿಸಲು ಅವಕಾಶವಿರುವುದಿಲ್ಲ. ಬದಲಾಗಿ ಸಾರ್ವಜನಿಕರು ಎಂ.ಜಿ.ರಸ್ತೆಯಿಂದ ವಾಪಸ್ ಹೋಗುವ ಸಂದರ್ಭದಲ್ಲಿ ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್ಪಾರ್ಕ್ ಮೆಟ್ರೋ ನಿಲ್ದಾಣದ ಮೂಲಕ ನಿರ್ಗಮಿಸಲು ಕೋರಿದೆ.
8) ನಗರದ ಇತರೆ ವಿಭಾಗಗಳ ಪ್ರಮುಖ ಹೊಸ ವರ್ಷ ಆಚರಣೆಯ ಸ್ಥಳಗಳಾದ ಫೀನಿಕ್ಸ್ ಮಾಲ್. ಮಾಲ್ ಆಫ್ ಎಷಿಯಾ ಹಾಗೂ ನಗರದ ಇತರೆ ಪ್ರಮುಖ ಸ್ಥಳಗಳಲ್ಲಿ ನಡೆಯಲಿರುವ ಹೊಸ ವರ್ಷಾಚರಣೆ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಮತ್ತು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಕೋರಮಂಗಲ, ಇಂದಿರಾನಗರ, ಮಾರತ್ಹಳ್ಳಿ, ಹೆಚ್.ಆರ್.ಬಿ.ಆರ್ ಲೇಔಟ್, ಏರ್ ಪೋರ್ಟ್ ರಸ್ತೆ, ವೈಟ್ಫೀಲ್ಡ್ ಪ್ರದೇಶಗಳಲ್ಲಿ ನಡೆಯಲಿರುವ ಹೊಸ ವರ್ಷಾಚರಣೆಯ ಬಂದೋಬಸ್ತ್ ಕರ್ತವ್ಯಕ್ಕೆ 4-ಡಿಸಿಪಿ, 10-ಎ.ಸಿ.ಪಿ. 25-ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ 2500 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
9) ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ. ದಿನಾಂಕ: 31- 12-2023 ರಂದು ರಾತ್ರಿ ಡೋನ್ ಕ್ಯಾಮರಾಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
10) ನೂತನ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ರೇವ್ ಪಾರ್ಟಿಗಳು (ಡ್ರಗ್ಸ್ ಸರಬರಾಜು) ಆಗುವುದನ್ನು ನಿಯಂತ್ರಿಸಲು ನಗರದ ಎಲ್ಲಾ ಡಿ.ಸಿ.ಪಿ ರವರು, ಸಿಸಿಬಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಡಿಸೆಂಬರ್ ತಿಂಗಳಲ್ಲಿ 9 ವಿದೇಶಿ ಡ್ರಗ್ಸ್ ಪೆಡ್ಲರ್ ಸೇರಿದಂತೆ 56 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರುಗಳ ವಶದಿಂದ 99.85 ಕೆ.ಜಿ ಡ್ರಗ್ಸ್ ವಶಪಡಿಸಿಕೊಂಡು 40 ಪ್ರಕರಣಗಳನ್ನು ದಾಖಲಿಸಲಾಗಿದೆ.
11) ಕ್ಲಬ್ಗಳು, ಪಬ್ಗಳು ಮತ್ತು ರೆಸ್ಟೋರೆಂಟ್ಗಳು ಹೊಸ ವರ್ಷಾಚರಣೆ ನಿಮಿತ್ತ ಸದಸ್ಯರುಗಳು ಮತ್ತು ಅತಿಥಿಗಳಗೆ ಔತಣ ಕೂಟ – ಇವೆಂಟ್ಗಳಗೆ ಅನುಮತಿ ನೀಡುವಾಗ ನಿಗಧಿತ ಮಿತಿಯನ್ನು ಮೀರದಂತೆ ಪಾಸ್ಗಳನ್ನು ವಿತರಿಸುವಂತೆ ಮಾಲೀಕರಿಗೆ ಸೂಚನೆಗಳನ್ನು ನೀಡಲಾಗಿದೆ.
12) ಹೊಸ ವರ್ಷಾಚರಣೆ ಸಲುವಾಗಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಮದ್ಯವನ್ನು ಪತ್ತೆಮಾಡಿ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು.
13) ಮಧ್ಯರಾತ್ರಿ 1-00 ಗಂಟೆಯವರೆಗೆ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಸರ್ಕಾರದ ಅನುಮತಿ ಇದ್ದು, ನಿಗಧಿತ ಸಮಯದವರೆಗೆ ಮಾತ್ರ ಸಾರ್ವಜನಿಕರು ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು
ನಡೆಸಲು ಅನುಮತಿ ನೀಡಲಾಗಿದೆ.
14) ಸಂಚಾರ ವಿಭಾಗದ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಸಹಾ ಹೊಸ ವರ್ಷಾಚರಣೆ ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
15) ಸುರಕ್ಷತೆ ದೃಷ್ಟಿಯಿಂದ ನಗರದ ಎಲ್ಲಾ ಮೇಲು ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಭಂದಿಸಲಾಗಿದೆ. > ಸಾರ್ವಜನಿಕರು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು, ಡ್ರಗ್ಸ್ ಸರಬರಾಜು, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿದ್ದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಯಾವುದಾದರೂ ವಾರಸುದಾರರು ಇಲ್ಲದ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸರಿಗಾಗ/ ದೂರವಾಣಿ ಸಂಖ್ಯೆ 112 ಕ್ಕೆ ಮಾಹಿತಿ ನೀಡಲು ಕೋರಿದೆ.
ಒಟ್ಟಾರೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ನಗರದಾದ್ಯಂತ ಕಟ್ಟೆಚ್ಚರವಹಿಸಿ, ಸುಗಮ ಸಂಚಾರ ವ್ಯವಸ್ಥೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪೊಲೀಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಿದ್ದು. ಸ್ಥಳೀಯ ಅಗತ್ಯಗಳಿಗನುಗುಣವಾಗಿ ಅಧಿಕಾರಿಗಳು / ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.