ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ 5 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಸೇರಿದಂತೆ ಹಲವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ನ್ಯಾಯಾಲಯದ ಆದೇಶದಂತೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಇದರ ಮಧ್ಯೆ ಚೈತ್ರಾ ತಮ್ಮ ಹೆಸರಿನೊಂದಿಗೆ ಕುಂದಾಪುರದ ಹೆಸರನ್ನೂ ಸೇರಿಸಿಕೊಂಡಿದ್ದು, ಅವರನ್ನು ಈ ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು. ಅಲ್ಲದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಚೈತ್ರಾ ಕುಂದಾಪುರ ಎಂದೇ ಅವರು ಬರೆದುಕೊಂಡಿದ್ದರು. ಹೀಗಾಗಿ ಮಾಧ್ಯಮಗಳಲ್ಲೂ ಸಹ ಇದೇ ರೀತಿ ವರದಿಯಾಗುತ್ತಿತ್ತು.
ಇದೀಗ ಕುಂದಾಪುರ ಮೂಲದ ಉದ್ಯಮಿ, ಹನುಮಂತ ನಗರ ನಿವಾಸಿ ಗಣೇಶ್ ಶೆಟ್ಟಿ ಎಂಬವರು ಚೈತ್ರಾ ಹೆಸರಿನೊಂದಿಗೆ ಕುಂದಾಪುರ ಹೆಸರು ಬಳಸಬಾರದು ಎಂದು ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಗಣೇಶ್ ಶೆಟ್ಟಿ ಅವರ ಪರವಾಗಿ ನ್ಯಾಯಾಲಯದಲ್ಲಿ ವಕೀಲ ಪವನ್ ಚಂದ್ರಶೆಟ್ಟಿ ವಾದಿಸಿದ್ದರು.
ಚೈತ್ರಾ ಹೆಸರಿನ ಜೊತೆಗೆ ಕುಂದಾಪುರ ಊರಿನ ಹೆಸರು ಬಳಸುವುದರಿಂದ ಇಲ್ಲಿನ ನಾಗರೀಕರ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ. ಹೀಗಾಗಿ ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಚೈತ್ರಾ ಕುಂದಾಪುರ ಎಂದು ಬಳಸದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.