ಬೆಂಗಳೂರು: ಬಿಜೆಪಿ ವಿರುದ್ಧ ಯಾವತ್ತೂ ಮಾತನಾಡಲ್ಲ, ಪಕ್ಷ ತಾಯಿ ಸಮಾನ. ಆದರೆ ಕೆಲ ದೌರ್ಬಲ್ಯಗಳ ಬಗ್ಗೆ ಮಾತನಾಡಬೇಕಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, ಪಕ್ಷದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ತಪ್ಪು ಅಂತಾ ನನಗೆ ಗೊತ್ತಿದೆ. ಯಾರಿಗೂ ಅಪಮಾನ ಮಾಡುವ ಉದ್ದೇಶ ನನಗಿಲ್ಲ. ಬಿ ಎಸ್ ವೈ ಅವರನ್ನು ಕೆಳಗಿಳಿಸಿದಾಗ ಕೆಲವರನ್ನು ಮಾತನಾಡುವುದಕ್ಕೆ ಬಿಟ್ಟರು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ನಷ್ಟ ಆಗಿದ್ದು ಅವರಿಗಲ್ಲ, ಪಕ್ಷಕ್ಕೆ. ಅಧಿಕಾರಕ್ಕೆ ಬರಲು ಇವರಿಗೆ ಯಡಿಯೂರಪ್ಪನವರ ಮುಖ ಬೇಕು. ಅಧಿಕಾರ ಎಂಜಾಯ್ ಮಾಡಲು ಇವರಿಗೆ ಯಡಿಯೂರಪ್ಪ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದಿದ್ದರೆ ಬಿಜೆಪಿಗೆ ಈ ಸ್ಥಿತಿ ಬರುತ್ತಿರಲಿಲ್ಲ. 70 ಹೊಸಬರಿಗೆ ಅವಕಾಶ ಅಂತಾ ನಿಮ್ಮ ಚೇಲಾಗಳಿಗೆ ಟಿಕೆಟ್ ಕೊಟ್ರಾ? ಅಣ್ಣಾಮಲೈ ತಮಿಳುನಾಡಿನಿಂದ ಬಂದು ಇಲ್ಲಿ ನಮಗೆ ಹೇಳಬೇಕಾ? ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಎಲ್ಲರಿಗೂ ಅನ್ಯಾಯ ಮಾಡಿದರು. ಬಿಜೆಪಿ ಕಚೇರಿಗೆ ಯಾರಾದರೂ ಬಂದರೆ ಬೊಮ್ಮಾಯಿ ಹೋಗಬೇಕಿತ್ತು. ಸರ್ಕಾರದಲ್ಲಿ 6 ಖಾತೆ ಹಂಚಿಕೆ ಮಾಡದೇ ಯಾಕೆ ಖಾಲಿ ಇಟ್ಟಿದ್ರಿ? ಹಣ ಮಾಡುವುದಕ್ಕೆ ಒಬ್ಬರಿಗೆ ಎರಡೆರಡು ಖಾತೆ ಕೊಟ್ರಾ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.