ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಕೆ.ಎಸ್.ಯು ಘಟಿಕೋತ್ಸವ ಭವನದಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ.
ಕೆ.ಎಸ್.ಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಿದ್ದ ಹುಲಿ ಯೋಜನೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, 2022ರ ವರದಿ ಪ್ರಕಾರ ದೇಶದಲ್ಲಿರುವ ಹುಲಿಗಳ ಸಂಖ್ಯೆ 3,167 ಎಂದರು.
ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಶೇ.75ರಷ್ಟು ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚಿರುವುದು ಗೌರವದ ಕ್ಷಣ ಎಂದು ಹೇಳಿದರು.
ಹುಲಿ ಸಂರಕ್ಷಣಾ ಸಾಫಲ್ಯ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಲ್ಲುತ್ತದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಹುಲಿಗಳು ಭಾರತದಲ್ಲಿದ್ದು, ಶೇ.75ಕ್ಕೆ ಏರಿಕೆಯಾಗಿದೆ. ಭಾರತ ಹಾಗೂ ಹುಲಿ ನಡುವಿನ ಸಂಬಂಧ ಬಹಳ ಪುರಾತನವಾದದ್ದು, ದೇಶದ ಅನೇಕ ಸಮುದಾಯಗಳು ಹುಲಿಯನ್ನು ಪೂಜಿಸುತ್ತವೆ. ದುರ್ಗಾ ದೇವಿ, ಸ್ವಾಮಿ ಅಯ್ಯಪ್ಪ ವಾಹನ ಹುಲಿ. ಭಾರತ ಜಗತ್ತಿನ ಅತಿ ದೊಡ್ಡ ಹುಲಿ ಸಂರಕ್ಷಣಾ ದೇಶ. ಹಾಗೆಯೇ ಆನೆ ಸಂರಕ್ಷಣಾ ದೇಶವೂ ಹೌದು. ಭಾರತದಲ್ಲಿ ಸಿಂಹಗಳ ಸಂಖ್ಯೆಯೂ ಹೆಚ್ಚಿದೆ ಎಂದು ತಿಳಿಸಿದರು.