ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಾ. ಕೆ. ಸುಧಾಕರ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದು, ಈ ಹಿಂದೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಮುಂದೆ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಕುರಿತು ಕೇಳಲು ಹೋದರೆ ಈ ಸರ್ಕಾರದಲ್ಲಿ ನನ್ನ ಮಾತೇ ನಡೆಯುತ್ತಿಲ್ಲ ಎಂದಿದ್ದರು. ಹೀಗಾಗಿ ಅನಿವಾರ್ಯವಾಗಿ ನಾವು ಬಿಜೆಪಿಗೆ ಹೋಗಬೇಕಾಯಿತು ಎಂಬರ್ಥದ ಮಾತುಗಳನ್ನು ಆಡಿದ್ದರು.
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್, ಸಿದ್ದರಾಮಯ್ಯ ಯಾರನ್ನು ಕೂಡ ಬಿಜೆಪಿ ಜೊತೆಗೆ ಹೋಗಿ ಎಂದು ಹೇಳಿಲ್ಲ. ಇಷ್ಟು ದಿನ ಬಿಟ್ಟು ಸುಧಾಕರ್ ಹೀಗೇಕೆ ಈ ಮಾತುಗಳನ್ನು ಆಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಈಗ ಈ ವಿಷಯ ಕುರಿತಂತೆ ಮತ್ತೊಬ್ಬ ಮಾಜಿ ಸಚಿವ ಎಚ್. ವಿಶ್ವನಾಥ್ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್. ವಿಶ್ವನಾಥ್, ಆ ಸಂದರ್ಭದಲ್ಲಿ ಬಿಜೆಪಿ ಜೊತೆಗೆ ಹೋದವರ ಟೀಮಿಗೆ ನಾನು ಕ್ಯಾಪ್ಟನ್ ಆಗಿದ್ದೆ. ಹಾಗಾಗಿ ಏನು ನಡೆಯಿತು ಎಂಬುದು ಎಲ್ಲವೂ ನನಗೆ ಗೊತ್ತು. ಸಿದ್ದರಾಮಯ್ಯ ಯಾರಿಗೂ ಕೂಡ ಬಿಜೆಪಿಯೊಂದಿಗೆ ಹೋಗಿ ಎಂದು ಹೇಳಿಲ್ಲ. ಸುಧಾಕರ್ ಈಗ ಯಾಕೆ ಆ ಮಾತುಗಳನ್ನು ಆಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.