ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿಯಿದ್ದು, ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿಗೆ ತೆರಳಲಿರುವ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಕೇಂದ್ರ ನಾಯಕರನ್ನು ಭೇಟಿಯಾಗಿ ಬಜೆಟ್ ನಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಧವ್ಯವಾದ ಅರ್ಪಿಸಲಿದ್ದಾರೆ. ಬಳಿಕ ಸಂಜೆಯೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡಿರುವ ಹಿನ್ನೆಲೆ ಹಾಗೂ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ನಾಯಕರನ್ನು ಹಾಗೂ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಇದೇ ವೇಳೆ ಚುನಾವಣೆ ತಯಾರಿ, ಎರಡು ದಿನಗಳ ಹಿಂದೆ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಚುನಾವಣೆ ಸಂದರ್ಭದಲ್ಲಿ ಸಿಬಿಐಗೆ ವಹಿಸುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಒಟ್ಟಾರೆ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ.