ಬೆಂಗಳೂರು: 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರ ವಿಚಾರವಾಗಿ ಈಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಮಧ್ಯೆ ಜಟಾಪಟಿ ಆರಂಭವಾಗಿದೆ.
ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ವಾಪಸ್ ಪಡೆಯುತ್ತಿರುವುದಾಗಿ ಷಡಕ್ಷರಿ ತಿಳಿಸಿದ್ದರು. ಆದರೆ ಈ ನಿರ್ಧಾರಕ್ಕೆ ಅಪಸ್ವರ ಎತ್ತಿರುವ ಗುರುಸ್ವಾಮಿ, ಶೇ.25ರಷ್ಟಾದರೂ ವೇತನ ಹೆಚ್ಚಿಸಬೇಕು. ಹಾಗಾಗಿ ಮುಷ್ಕರ ಮುಂದುವರೆಸುವುದಾಗಿ ಹೇಳಿದ್ದಾರೆ. ಇದು ಸರ್ಕಾರಿ ನೌಕರರ ಸಂಘದಲ್ಲಿಯೇ ಒಡಕಿಗೆ ಕಾರಣವಾಗಿದೆ.
ಹೋರಾಟದಲ್ಲಿ ರಾಜಕಾರಣ ಬರಬಾರದು. ಷಡಕ್ಷರಿ ನಡೆಯನ್ನು ನಾವು ವಿರೋಧಿಸುತ್ತೇವೆ. ಷಡಕ್ಷರಿ ಏಕಪಕ್ಷಿಯವಾಗಿ ನಿರ್ಧಾರ ಕೈಗೊಂಡು ಮುಷ್ಕರ ವಾಪಸ್ ಪಡೆದಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.
ಗುರುಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಷಡಕ್ಷರಿ, ಆತ ಒಬ್ಬ ಸರ್ಕಾರಿ ನೌಕರ. ಹಂಗಾಮಿ ಅಧ್ಯಕ್ಷ ಅಷ್ಟೇ. ಮೊನ್ನೆ ನಡೆದ ಸಭೆಯಲ್ಲಿ ಗುರುಸ್ವಾಮಿಯೂ ಇದ್ದರು. ಅವರು ಪ್ರಚಾರಕ್ಕಾಗಿ ಹೀಗೆ ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.