ಬೆಂಗಳೂರು: ವಿಪಕ್ಷಗಳ ಮಹಾ ಮೈತ್ರಿ ಕೂಟ ಸಭೆಗೆ ರಾಜ್ಯದ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಮಾಜಿ ಸಿಎಂ ಕುಮರಸ್ವಾಮಿ ಆರೋಪಕ್ಕೆ, ಕುಮಾರಸ್ವಾಮಿಯವರಿಗೂ ಪ್ರಚಾರ ಬೇಕಲ್ವಾ? ಹಾಗಾಗಿ ಮಾತಾಡ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಡಿ.ಕೆ. ಶಿವಕುಮಾರ್ ಹೇಳಿಕೆಗೆ ಇದೀಗ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿದಿದ್ದೇನೆ. ತಪ್ಪು ತೋರಿಸಿದರೆ ಅದನ್ನು ಪ್ರಚಾರಕ್ಕಾಗಿ… ಎಂದು ಹೇಳಿದರೆ ಅಂತವರಿಗೆ ಏನು ಉತ್ತರ ಕೊಡಲು ಆಗುತ್ತೆ? ಮೂರು ಬಿಟ್ಟವರಿಗೆ ಏನು ಹೇಳೋದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿಕ್ಕಿಂ ನಲ್ಲಿ ನಿಗದಿಯಾಗಿದ್ದ ಸಭೆ ಇಲ್ಲಿನ ಯಾಕೆ ನಡೆಯುತ್ತಿದೆ? ಇವರ ಪ್ರಚಾರಕ್ಕಾಗಿ ಸಭೆಯನ್ನು ಇಲ್ಲಿಗೆ ಶಿಫ್ಟ್ ಮಾಡಿದ್ದಾರೆ. ಅಂದಮೇಲೆ ಪ್ರಚಾರಕ್ಕಾಗಿ ಮಾಡುತ್ತಿರುವವರು ಯಾರು? ಇನ್ನು ಈ ರೀತಿ ರಾಜಕೀಯ ಸಭೆಗಳು ಹಲವು ನಡೆದಿವೆ. ಆದರೆ ಯಾವ ಸರ್ಕಾರವೂ ಐ ಎ ಎಸ್ ಅಧಿಕಾರಿಗಳನ್ನು ಹೀಗೆ ಬಳಸಿಕೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕೂಡ ಸಭೆ ಮಾಡಿದ್ದರು. ನನಗೂ ಆಹ್ವಾನ ನೀಡಿದ್ದರು ಹೀಗೆ ಮಾಡಿರಲಿಲ್ಲ. ಆದರೆ ರಾಜ್ಯ ಸರ್ಕಾರ ಸ್ವೇಚ್ಛಾಚಾರದಿಂದ ನಿಯಮ ಉಲ್ಲಂಘನೆ ಮಾಡಿ ಅಧಿಕಾರಿಗಳನ್ನು ಸಭೆಗೆ ನೇಮಕ ಮಾಡಿದೆ. ಮುಖ್ಯಮಂತ್ರಿಗಳ ಆದೇಶದಿಂದಲೇ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.