ಬೆಂಗಳೂರು: ಶೋಭಾ ಕರಂದ್ಲಾಜೆ ಅವರೇ ನೀವು ಕರ್ನಾಟಕ ಚುನಾವಣೆಯಲ್ಲಿ ಸೀತಾಮಾತೆ ಪಾತ್ರ ಮಾಡಿ ಶೂರ್ಪನಖಿ ಪಾತ್ರ ಮಾಡಬೇಡಿ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಟಾಂಗ್ ನೀಡಿದ್ದಾರೆ.
ಮೇ 6 ಹಾಗೂ 7ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ದಾರಿಯಲ್ಲಿ ಆಂಬುಲೆನ್ಸ್ ತಂದು ಸೀನ್ ಕ್ರಿಯೇಟ್ ಮಾಡಲು ಹೊರಟಿದೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿರುವ ರಮೇಶ್ ಬಾಬು, ಕಳೆದ ಬಾರಿ ಮೋದಿ ರೋಡ್ ಶೋ ವೇಳೆ ಆಂಬುಲೆನ್ಸ್ ಸಮಸ್ಯೆಯಾಗಿದ್ದು, ಮಾಧ್ಯಮಗಳಲ್ಲಿ ವರದಿಯಾಗಿದೆ. ಜನರಿಗೆ ಸಮಸ್ಯೆ ಆಗಬಾರದು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಶೋಭಾ ಕರಂದ್ಲಾಜೆಯವರು ತುಂಬಾ ಚೆನ್ನಾಗಿ ಮಾನುಪುಲೇಟ್ ಮಾಡುತ್ತಾರೆ. ಅದಕ್ಕೆ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಅವರೇ ನೀವು ಕರ್ನಾಟಕ ಚುನಾವಣೆಯಲ್ಲಿ ಸೀತಾಮಾತೆ ಪಾತ್ರ ಮಾಡಿ. ಶೂರ್ಪನಖಿ ಪಾತ್ರ ಮಾಡಬೇಡಿ. ರಾಜ್ಯದ ಜನರಿಗೆ ಏನು ಅನುಕೂಲ ಆಗುತ್ತೋ ಅದನ್ನು ಮಾಡಿ. ರೋಡ್ ಶೋ ದಿಂದ ನಿಮಗೆ ಸಮಸ್ಯೆಯಾಗದಿರಬಹುದು. ಆದರೆ ಬೀದಿಬದಿ ವ್ಯಾಪಾರಿಗಳಿಗೆ, ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅವರೊಬ್ಬ ಕೇಂದ್ರ ಸಚಿವರಾಗಿ ಪ್ರಧಾನಿಯವರಿಗೆ ಸಲಹೆ ಕೊಡಲಿ. ಪ್ರಧಾನಿಯವರಿಗೆ ಇವರ ಪ್ರೋಟೋಕಾಲ್ ಬೇರೆ. ರಾಹುಲ್ ಗಾಂಧಿ ಅವರಿಗೆ ಆ ರೀತಿ ಇಲ್ಲ ಎಂದು ಕಿಡಿಕಾರಿದ್ದಾರೆ.