ಬೆಂಗಳೂರು: ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ, ಚುನಾವಣೆಗೂ ಮುನ್ನ ಸಿದ್ದರಾಮಯ್ಯ ನನಗೂ ಫ್ರೀ, ನಿಮಗೂ ಫ್ರೀ…… ಎಲ್ಲಾ ಫ್ರೀ……. ಎಂದರು. ಈಗ ಗ್ಯಾರಂಟಿ ಯೋಜನೆ ಜಾರಿಗೆ ವಿಳಂಬ ಮಾಡುತ್ತಿದ್ದಾರೆ. 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದಾರೆ. ಹಾಗಾಗಿ ರಾಜ್ಯದ ಜನರು ಯಾರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದರು.
200 ಯುನಿಟ್ ವರೆಗೆ ಯಾರೂ ವಿದ್ಯುತ್ ಬಿಲ್ ಪಾವತಿ ಮಾಡಬೇಡಿ. ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಕಾಂಗ್ರೆಸ್ ನಿಂದ ಕುತಂತ್ರ ರಾಜಕಾರಣ ನಡೆಯುತ್ತಿದೆ. ಮತದಾನಕ್ಕೂ ಮುನ್ನ ಕೂಪನ್ ಕಾರ್ಡ್ ಗಳನ್ನು ಹಂಚಿದ್ದಾರೆ. ಅಮಾಯಕ ಜನರಿಗೆ 5 ಸಾವಿರ ಮೌಲ್ಯದ ಕೂಪನ್ ಹಂಚಿ ವಂಚಿಸಲಾಗಿದೆ. 30 ಕೋಟಿ ಗಿಫ್ಟ್ ನ್ನು ಕಾಂಗ್ರೆಸ್ ಈಗ ಜನರಿಗೆ ನೀಡಬೇಕು ಎಂದು ಹೇಳಿದರು.
5 ಸಾವಿರ ರೂ. ಗಿಫ್ಟ್ ಕೊಡುತ್ತೇವೆ ಎಂದು ಜನರಿಗೆ ವಂಚಿಸಲಾಗಿದೆ. ಇದಕ್ಕೆ ನೀವು ಎಷ್ಟು ಪರ್ಸೆಂಟ್ ಕಮಿಷನ್ ಹೊಡೆಯುತ್ತೀರಾ ? ಎಂದು ಪ್ರಶ್ನಿಸಿದ್ದಾರೆ. 40 ಕ್ಷೇತ್ರಗಳಲ್ಲಿ ಕೂಪನ್ ಕಾರ್ಡ್ ಹಂಚಲಾಗಿದೆ. ಆರ್.ಆರ್. ನಗರ, ಕುಣಿಗಲ್, ರಾಮನಗರ, ಮಾಗಡಿ ಸೇರಿದಂತೆ ಹಲವೆಡೆ ಕೂಪನ್ ಹಂಚಲಾಗಿದೆ. ಇಂತಹ ಅಕ್ರಮ ಕೂಪನ್ ಗಳಿಂದಾಗಿ ನಮ್ಮ ಪಕ್ಷ ಸೋತಿದೆ. ಕಾಂಗ್ರೆಸ್ ಅಕ್ರಮ ಕೂಪನ್ ಬಗ್ಗೆ ಸಿಎಂ ಸಿದ್ದರಾಮಯ್ಯ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.