ಕೆಲವು ತಿಂಗಳುಗಳಿಂದ ನಿಯಂತ್ರಣದಲ್ಲಿದ್ದ ಕೋವಿಡ್ ಸೋಂಕು ಈಗ ಮತ್ತೆ ಹೆಚ್ಚಳವಾಗುತ್ತಿದೆ. ಬಹುಕಾಲದ ಬಳಿಕ ಇದೇ ಮೊದಲ ಬಾರಿಗೆ 600ಕ್ಕೂ ಅಧಿಕ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. ಕರ್ನಾಟಕದಲ್ಲೂ ಸಹ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ.
ಬೇಸಿಗೆ ಆಗಿರುವ ಕಾರಣ ವೈರಲ್ ಜ್ವರ ಮತ್ತು ಶ್ವಾಸಕೋಶದ ಸೋಂಕಿನ ಜೊತೆಗೆ H3N2 ಆತಂಕ ಸಹ ಕಾಡುತ್ತಿದೆ. ಇದರ ಮಧ್ಯೆ ಕೇಂದ್ರ ಆರೋಗ್ಯ ಸಚಿವಾಲಯ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಪತ್ರ ಬರೆದಿದೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗುಜರಾತ್ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದ್ದು, ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ತಿಳಿಸಲಾಗಿದೆ. ಹೀಗಾಗಿ ಸ್ಥಳೀಯವಾಗಿ ಸೋಂಕು ಹರಡುವಿಕೆಯ ಮೇಲೆ ನಿಗಾ ಇಡಬೇಕು ಎಂದು ಸೂಚಿಸಲಾಗಿದೆ.