ಬೆಳಗಾವಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಪ್ರತಿಷ್ಠೆ, ಬಿಗ್ ಫೈಟ್ ಗೆ ಕಾರಣವಾಗಿದ್ದ ರಾಜಹಂಸಗಡ ಕೋಟೆಯ ಬೃಹತ್ ಶಿವಾಜಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನಾವರಣ ಮಾಡಿದ್ದಾರೆ.
ಬೆಳಗಾವಿಯ ರಾಜಹಂಸಗಡ ಕೋಟೆಗೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಶಿವಾಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರತಿಮೆ ಅನಾವರಣ ಮಾಡಿದರು. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು.
ಈ ಮೂಲಕ 43 ಅಡಿ ಎತ್ತರದ ಬೃಹತ್ ಶಿವಾಜಿ ಪ್ರತಿಮೆ ರಾಜಹಂಸಗಡ ಕೋಟೆಯಲ್ಲಿ ತಲೆ ಎತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರ ಇದಾಗಿದ್ದು, ಆದರೆ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಸಚಿವ ಸುನೀಲ್ ಕುಮಾರ್, ಶಾಸಕ ರಮೇಶ್ ಜಾರಕಿಹೊಳಿ, ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ್ ಬೆನಕೆ, ಅಭಯ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು. ಆದರೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಕಾರ್ಯಕ್ರಮದಿಂದ ದೂರ ಉಳಿದಿರುವುದು ಅಚ್ಚರಿಗೆ ಕಾರಣವಾಗಿದೆ.
ತಮ್ಮ ಕ್ಷೇತ್ರದಲ್ಲಿನ ಶಿವಾಜಿ ಪ್ರತಿಮೆ ಅನಾವರಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾರ್ಚ್ 6ರಂದು ದಿನಾಂಕ ನಿಗದಿ ಮಾಡಿದ್ದರು. ಸಿಎಂ ಬೊಮ್ಮಾಯಿ ಅವರಿಂದಲೇ ಪ್ರತಿಮೆ ಅನಾವರಣ ಮಾಡಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಈಗ ರಮೇಶ್ ಜಾರಕಿಹೊಳಿ ತನ್ನ ಪ್ರತಿಷ್ಠೆಗಾಗಿ ಇಂದೇ ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸುವಂತೆ ಮಾಡಿ, ಸಿಎಂ ಬೊಮ್ಮಾಯಿ ಅವರಿಂದ ಅನಾವರಣಗೊಳಿಸಿದ್ದಾರೆ. ಇದು ಚುನಾವಣೆ ಹೊತ್ತಲ್ಲಿ ಮತ್ತೊಂದು ಜಿದ್ದಾಜಿದ್ದಿಗೆ ಕಾರಣವಾಗಿದೆ.