ಬೆಂಗಳೂರು: ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಶಾ ಆಗಮನ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಮನಗರಕ್ಕೆ ಪ್ರಧಾನಿ ಮೋದಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಮೋದಿಯವರನ್ನಾದರು ಕರೆಸಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಲಿ ನನಗೆ ಆತಂಕ ಇಲ್ಲ. ಅವರು ಒಂದು ದಿನ ಭಾಷಣ ಮಾಡಿ ಹೋಗಬಹುದಲ್ವಾ? ಮಂಡ್ಯ, ಮೈಸೂರು, ತುಮಕೂರಿನಿಂದ ಜನರನ್ನು ಕರೆಸಬಹುದು. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ಗಮನಿಸಿದ್ದೇನೆ. ನಾವು 4 ತಿಂಗಳಿಂದ ನಡೆಸಿದ ರೋಡ್ ಶೋ ಮುಂದೆ ಇದೇನೂ ಅಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕ್ರಮ ಸರಿಸಾಟಿಯಲ್ಲ ಎಂದು ಟಾಂಗ್ ನೀಡಿದರು.
ಇದೇ ವೇಳೆ ನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ ಸ್ವಲ್ಪ ಆತಂಕ ಇದೆ. ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿಲ್ಲ. ಕೆ.ಆರ್. ನಗರ, ಚಾಮರಾಜನಗರ, ವರುಣಾದಲ್ಲಿ ಪ್ರಚಾರ ಸಭೆ ಕರೆದಿದ್ದೇನೆ ಎಂದು ಹೇಳಿದರು.