ಬೆಂಗಳೂರು: ಪಂಚಮಸಾಲಿ ಸಮುದಾಯ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿದ ರಾಜ್ಯ ಸರ್ಕಾರದ ನಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ತಲೆ ಮೇಲೆ ತುಪ್ಪ ಸುರಿದು ಬಸಣ್ಣ ಟೋಪಿ ಹಾಕಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿ ಹಾಗೂ ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಘೋಷಣೆ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸರ್ಕಾರ ತುಪ್ಪವನ್ನು ಮೊಣಕೈಗೂ ಸವರಿಲ್ಲ, ಮೂಗಿಗೂ ಸವರಿಲ್ಲ. ತಲೆ ಮೇಲೆ ತುಪ್ಪ ಸುರಿದರು. ಅದು ನಾಲಿಗೆಗೂ ಸಿಗುತ್ತಿಲ್ಲ. ಜನರಿಗೆ ಏನ್ ಟೋಪಿ ಹಾಕಿದ್ದಾರೆ ನಮ್ಮ ಬಸಣ್ಣ ಎಂದು ಅಭಿನಯ ಮಾಡಿ ತೋರಿದ್ದಾರೆ.
ಪಂಚಮಸಾಲಿ ಸಚಿವರು, ಶಾಸಕರು ರಾಜೀನಾಮೆ ಕೊಡಬೇಕು. ಒಕ್ಕಲಿಗ ಸ್ವಾಮೀಜಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಅವತ್ತು ಸಚಿವ ಆರ್.ಅಶೋಕ್ ಸಭೆಯಲ್ಲಿ ಭರವಸೆ ಕೊಟ್ಟು ಹೋದ್ರು. ಮಾನ ಮರ್ಯಾದೆ ಇದ್ದರೆ ಆರ್.ಅಶೋಕ್ ರಾಜೀನಾಮೆ ನೀಡಲಿ. ರಾಜೀನಾಮೆ ಕೊಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿ ಎಂದು ಆಗ್ರಹಿಸಿದರು.