ರಾಯಚೂರು: ಇತ್ತೀಚೆಗಷ್ಟೇ ಮರಳು ಮಾಫಿಯಾಗೆ ಕಲಬುರ್ಗಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಬಲಿಯಾಗಿರುವ ಪ್ರಕರಣದ ಬೆನ್ನಲೇ ಇದೀಗ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿಯೂ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಆರೋಪಗಳು ಕೇಳಿಬಂದಿದ್ದು, ದೇವದುರ್ಗ ಶಾಸಕಿ ಮರಳು ದಂಧೆಕೋರರ ವಿರುದ್ಧ ಸಿಡಿದೆದ್ದಿದ್ದಾರೆ.
ಮರಳು ಸಾಗಿಸುವ ಟಿಪ್ಪರ್ ನಿನ್ನೆ ರಾತ್ರಿ ಶಾಸಕಿ ಕರೆಮ್ಮ ಅವರ ಕಾರನ್ನು ಅಡ್ಡಗಟ್ಟಿದೆ ಎಂಬ ಆರೋಪ ಕೇಳಿಬಂದಿದ್ದು, ಇದೇ ವೇಳೆ ಶಾಸಕಿ ಕರೆಮ್ಮ ನಡು ರಸ್ತೆಯಲ್ಲೇ, ನನ್ನ ಮೇಲೆ ಲಾರಿ ಹತ್ತಿಸುವವರು ಬನ್ನಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ರಸ್ತೆಯಲ್ಲಿಯೇ ಫೇಸ್ ಬುಕ್ ಲೈವ್ ಬಂದ ಶಾಸಕಿ ಕರೆಮ್ಮ, ನನ್ನ ಮೇಲೆ ಮರಳು ಟಿಪ್ಪರ್ ಹತ್ತಿಸುವ ಯತ್ನ ನಡೆದಿದೆ. ತಾಕತ್ತಿದ್ದರೆ ಲಾರಿ ಹತ್ತಿಸಿ ಬನ್ನಿ ನೋಡೋಣ. ನಾನೊಬ್ಬ ಶಾಸಕಿಯಾಗಿ ಬಂದಿಲ್ಲ. ಒಂದು ಹೆಣ್ಣುಮಗಳಾಗಿ ಬಂದು ನಿಂತಿದ್ದೇನೆ. ಅದ್ಯಾರು ಮರಳು ಲಾರಿಯವರು ಬರುತ್ತಾರೆ ಬರಲಿ ನಾನಿಲ್ಲೇ ಕಾಯುತ್ತಿದ್ದೇನೆ ಎಂದು ಆವಾಜ್ ಹಾಕಿದ್ದಾರೆ.
ದೇವದುರ್ಗದಲ್ಲಿ ವ್ಯಾಪಕವಾಗಿ ಮರಳು ಮಾಫಿಯಾ ನಡೆಯುತ್ತಿದೆ. ಸುತ್ತಮುತ್ತಲಿನ ಜನರು ಸಂಕಷ್ಟಕ್ಕೀಡಾಗಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರೂ ಅಧಿಕಾರಿಗಳಾಗಲಿ, ಪೊಲೀಸ್ ಸಿಬ್ಬಂದಿಗಳಾಗಲಿ ಅಕ್ರಮ ಮರಳುಗಾರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಯಾಕೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.