ಬೆಂಗಳೂರು: ಪಾರದರ್ಶಕತೆಯಿಂದ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಟೆಂಡರ್ ಗೆ ಕಮಿಟಿ ರಚಿಸಲಾಗಿದೆ. ಆ ಮೂಲಕವೇ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಹಾಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ಎಂಬ ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಯಾವ ಇಲಾಖೆ ಟೆಂಡರ್ ನಲ್ಲಿಯೂ ಭ್ರಷ್ಟಾಚಾರ ಆಗಿಲ್ಲ ಎಂದು ತಿಳಿಸಿದರು.
ಭ್ರಷ್ಟಾಚಾರ ನಡೆದಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಎರಡು ಟೆಂಡರ್ ಸಮಿತಿ ರಚಿಸಿದ್ದರು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿ ಈ ಎರಡೂ ಸಮಿತಿಯನ್ನು ಮುಚ್ಚುವ ಮೂಲಕ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಟ್ಟರು. ವೇಗವಾಗಿ ಹೋಗಲು ನ್ಯಾಷನಲ್ ಹೈವೆ ಇರುವಂತೆ ಭ್ರಷ್ಟಾಚಾರಕ್ಕೆ ವೇಗ ನೀಡಲು ಸಮಿತಿ ರದ್ದುಪಡಿಸಿ ಅಕ್ರಮಕ್ಕೆ ರಹದಾರಿ ಮಾಡಿದ್ದರು. ಎರಡೂ ಕಮಿಟಿಯನ್ನು ಮುಚ್ಚಿಸಿದ್ದು ಯಾಕೆ ಎಂದು ಕಾಂಗ್ರೆಸ್ ನವರು ಉತ್ತರ ಕೊಡಲಿ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.