ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಆಡಳಿತರೂಢ ಬಿಜೆಪಿ ಮಾತ್ರ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.
ಬಿಜೆಪಿ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆಸಿದ್ದು, ಇದರಲ್ಲಿ ಹೊರಹೊಮ್ಮಿದ ಫಲಿತಾಂಶವನ್ನು ಈಗಾಗಲೇ ಹೈಕಮಾಂಡ್ ಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಢವ ಢವ ಶುರುವಾಗಿದ್ದು, ಪಟ್ಟಿ ಬಿಡುಗಡೆಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪನವರು ಇಂದು ನವದೆಹಲಿಗೆ ತೆರಳುತ್ತಿದ್ದು, ಪಕ್ಷದ ವರಿಷ್ಠರೊಡನೆ ಸಮಾಲೋಚನೆ ನಡೆಸಲಿದ್ದಾರೆ.
ಆದರೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮಧ್ಯಾಹ್ನದಿಂದ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಸಂಚರಿಸಲಿದ್ದು, ಭಾನುವಾರ ವಾಪಸ್ ದೆಹಲಿಗೆ ತೆರಳಲಿದ್ದಾರೆ. ಹೀಗಾಗಿ ಸೋಮವಾರ ಅಥವಾ ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಬಹುದು ಎಂದು ಹೇಳಲಾಗಿದೆ.