ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ರಾಜ್ಯ ಬಿಜೆಪಿಯ ಹಿರಿಯ ನಾಯಕರೇ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ವರಿಷ್ಠರ ಹೇಳಿಕೆಯಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ. ನಿನ್ನೆವರೆಗೂ ನನಗೆ ಟಿಕೆಟ್ ಕನ್ಫರ್ಮ್ ಎಂದು ಹೇಳುತ್ತಿದ್ದವರು ಇಂದು ಬೆಳಿಗ್ಗೆ ಕರೆ ಮಾಡಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ. 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದವನಿಗೆ, ಓರ್ವ ಮಾಜಿ ಮುಖ್ಯಮಂತ್ರಿಯಾಗಿರುವವನಿಗೆ ಗೌರವವಿಲ್ಲವೇ? ಈ ಮಾತುಗಳು ಕೇಳಿ ನನಗೆ ತುಂಬಾ ನೋವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರಿಷ್ಠರ ಮಾತು ಕೇಳಿ ನನಗೂ ಶಾಕ್ ಆಯಿತು. ಆದರೆ ನಿಮ್ಮ ಮಾತಿಗೆ ನನಗೆ ಒಪ್ಪಿಗೆ ಇಲ್ಲ, ಈ ಬಾರಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರವನ್ನು ಆರಂಭಿಸಿಯಾಗಿದೆ. ಜನರು ಕೂಡ ಬಹಳ ವಿಶ್ವಾಸದಲ್ಲಿದ್ದಾರೆ. ಸಮೀಕ್ಷಾ ವರದಿ ಕೂಡ ನನಗೆ ಪಾಸಿಟಿವ್ ಇದೆ. ರಾಯಲ್ ಆಗಿ ಪಕ್ಷದ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದೇನೆ ಎಂದರು.
ಚುನಾವಣೆಗೆ ಮೂರು ತಿಂಗಳು ಇರುವಾಗ ಕರೆದು ನೀವು ಹಿರಿಯರಿದ್ದೀರಿ ಬೇರೆಯವರಿಗೆ ಅವಕಾಶ ನೀಡಿ ಎಂದು ಹೇಳಿದ್ದರೆ ಒಂದು ಗೌರವವೆನಿಸುತ್ತಿತ್ತು. ಆಗ ಯೋಚಿಸಬಹುದಿತ್ತು. ಈಗ ನಾಮಪತ್ರ ಸಲ್ಲಿಕೆಗೆ ಕೇವಲ ಮೂರು ದಿನ ಬಾಕಿಯಿದೆ. ಚುನಾವಣೆಗೆ ಕ್ಷೇತ್ರದಲ್ಲಿ ಅಭ್ಯರ್ಥಿ ಎಂಬ ನಿಟ್ಟಿನಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಿನ್ನೆವರೆಗೂ ಟಿಕೆಟ್ ಖಚಿತ ಎಂದು ಇಂದು ಕರೆ ಮಾಡಿ ಈ ರೀತಿ ಹೋಳೋದು ನೋವಾಗಲ್ವಾ? ಪಕ್ಷದಲ್ಲಿ ಹಿರಿಯ ನಾಯಕರಿಗೆ ಗೌರವ ಕೊಡುವ ಕೆಲಸವಾಗಬೇಕಿದೆ. ನನಗೆ ಕ್ಷೇತ್ರದ ಜನರ ಆಶಿರ್ವಾದ ಇದೆ. ನಾನು ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ಇನ್ನೂ ಹತ್ತು ವರ್ಷ ರಾಜಕೀಯದಲ್ಲಿ ಸಕ್ರಿ ಯನಾಗಿರುತ್ತೇನೆ ಎಂದು ಹೇಳಿದ್ದಾರೆ.