ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿರುವ ಬಿಜೆಪಿ ನಾಯಕರು ಇಂದು ಮಧ್ಯಾಹ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನಿವಾಸದಲ್ಲಿ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದು, ಬಹುತೇಕ ಸಂಜೆ ವೇಳೆಗೆ ಪಟ್ಟಿ ಹೊರ ಬೀಳುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಹಾಲಿ ಶಾಸಕರ ಪೈಕಿ ಕೆಲವರಿಗೆ ಟಿಕೆಟ್ ಕೈತಪ್ಪಲಿದೆ ಎನ್ನಲಾಗಿದ್ದು, ಹೀಗಾಗಿ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ವಿರೋಧ ಎದುರಿಸುತ್ತಿರುವ ಶಾಸಕರುಗಳಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ಇದರ ಮಧ್ಯೆ ಒಂದು ಕುಟುಂಬಕ್ಕೆ ಎರಡು ಟಿಕೆಟ್ ನೀಡಿದರೆ ಅಂತಹ ಸಂದರ್ಭದಲ್ಲಿ ತಮ್ಮ ಮಗನಿಗೂ ಅವಕಾಶ ನೀಡಿ ಎಂದು ಸಚಿವ ಸೋಮಣ್ಣ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದರ ಜೊತೆಗೆ 70 ವರ್ಷ ಮೇಲ್ಪಟ್ಟವರಿಗೂ ಸಹ ಟಿಕೆಟ್ ನೀಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.