
ಬೆಂಗಳೂರು: ಬಜರಂಗದಳ ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ವಿಚಾರವಾಗಿ ಬಿಜೆಪಿ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾವೂ ಕೂಡ ಆಂಜನೇಯನ ಭಕ್ತರೇ. ಬಿಜೆಪಿ ಪ್ರಚೋದಿಸುತ್ತಿದೆ ಎಂಬುದು ಜನರಿಗೂ ಅರ್ಥವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸುಮ್ಮನೇ ಆಂಜನೇಯನ ಹೆಸರಿಟ್ಟುಕೊಂಡು ಅಶಾಂತಿ ಕೆಲಸ ಮಾಡುವುದಲ್ಲ, ಹನುಮಂತನಿಗೂ ಬಜರಂಗದಳಕ್ಕೂ ಏನು ಸಂಬಂಧ? ಆಂಜನೇಯನೇ ಬೇರೆ, ಬಜರಂಗದಳವೇ ಬೇರೆ. ಹೆಸರಿಟ್ಟುಕೊಂಡ ಮಾತ್ರಕ್ಕೆ ಒಂದೇ ಅಲ್ಲ ಈಗ ಈ ಹಿಂದಿನ ಆರ್ ಎಸ್ ಎಸ್ ಬೇರೆ ಈಗಿನ ಆರ್ ಎಸ್ ಎಸ್ ಬೇರೆ ಹಾಗೇ ಎಂದು ಕಿಡಿಕಾರಿದರು.
ಬಿಜೆಪಿಯವರು ಬಜರಂಗಿ ಎಂದು ಅಭಿಯಾನ ಆರಂಭಿಸುವ ಅಗತ್ಯವಿಲ್ಲ. ನಾವೂ ಆಂಜನೇಯನ ಭಕ್ತರೇ. ಬಿಜೆಪಿಯವರು ಮಾತ್ರ ಆಂಜನೇಯನ ಭಕ್ತರಾ? ಬಜರಂಗದಳ ಬ್ಯಾನ್ ಅಂದಾಕ್ಷಣ ಬಿಜೆಪಿಯವರು ಯಾಕೆ ಗಾಬರಿಯಾಗಬೇಕು? ಮೊದಲು ರಾಜ್ಯದಲ್ಲಿ ದೇಶದಲ್ಲಿ ಅಶಾಂತಿ ಉಂಟು ಮಾಡುವುದನ್ನು, ಗಲಾಟೆ ಮಾಡಿಸುವುದನ್ನು ನಿಲ್ಲಿಸಲಿ. ಕುಂಬಳಕಾಯಿ ಕಳ್ಳ ಎಂದರೆ ಅವರ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ. ಬಜರಂಗದಳ ಬ್ಯಾನ್ ಎಂದರೆ ಅವರ್ಯಾಕೆ ಆತಂಕ ಪಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಅಭಿಯಾನಗಳನ್ನು ಮಾಡಿ ಶಾಂತಿಯ ತೋಟ ಕದಡುವುದಲ್ಲ. ಮೊದಲು ಅವರು ಜನರ ಹೊಟ್ಟೆಗೆ ಏನು ಕೊಟ್ಟಿದ್ದಾರೆ? ಎಂದು ಹೇಳಲಿ. ಉದ್ಯೋಗ ಏನು ಕೊಟ್ಟಿದ್ದಾರೆ? ಎಂದು ಹೇಳಲಿ ಎಂದು ಹೇಳುವ ಮೂಲಕ ಬಜರಂಗದಳ ಬ್ಯಾನ್ ಕಾಂಗ್ರೆಸ್ ಪ್ರಣಾಳಿಕೆ ಅಂಶವನ್ನು ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.