ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನ ಸುದ್ದಿ ಕೇಳಿ ಆಘಾತ ತಂದಿದೆ. ದೇವರು ಇದ್ದಾನೋ ಇಲ್ಲವೋ ಎನಿಸಿಬಿಡುತ್ತದೆ. ನನ್ನ ಸಹೋದರನನ್ನೇ ಕಳೆದುಕೊಂಡಷ್ಟು ನೋವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಧ್ರುವನಾರಾಯಣ ಅಗಲಿಕೆ ನನಗೆ ಮಾತ್ರವಲ್ಲ, ಕಾಂಗ್ರೆಸ್ ಗೆ ತುಂಬಲಾಗದ ನಷ್ಟ. ಪಕ್ಷಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಆಗಿರುವ ನಷ್ಟ. ಧ್ರುವನಾರಾಯಣ ಸಾವು ಎಂಬ ವಿಷಯ ಕೇಳುತ್ತಿದ್ದಂತೆ ನಂಬಲು ಸಾಧ್ಯವಾಗಿಲ್ಲ. ಬಹಳ ತಾಳ್ಮೆ ಇರುವ ವ್ಯಕ್ತಿ. ನನಗೆ ಎಷ್ಟೋ ಬಾರಿ ಸಮಾಧಾನವನ್ನು ಮಾಡಿದ್ದವರು. ಯಾರಿಗೂ ನೋವುಂಟು ಮಾಡಬಾರದು ಎಂಬ ಮನೋಭಾವದವರು. ಎಲ್ಲರನ್ನೂ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಗಳ ಗಳನೆ ಕಣ್ಣೀರಿಟ್ಟಿದ್ದಾರೆ.
ಧ್ರುವನಾರಾಯಣ ಅಗಲಿಕೆಯಿಂದ ಧಿಗ್ಭ್ರಾಂತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.